ವಿಶೇಷ ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ವ್ಯಾಪಕ ಗೊಂದಲಗಳು ಉಂಟಾಗಿದ್ದು, ಚುನಾವಣಾ ಆಯೋಗ ತಳಮಟ್ಟದಲ್ಲಿ ಕಂಡುಬಂದಿರುವ ಸಮಸ್ಯೆಗಳನ್ನು ತಕ್ಷಣ ಸರಿಪಡಿಸಿ, ಕನಿಷ್ಠ 10 ದಿನಗಳ ಕಾಲಾವಕಾಶ ನೀಡಬೇಕು ಎಂದು ಕುಣಿಗಲ್ ಶಾಸಕ ಡಾ. ರಂಗನಾಥ್ ಒತ್ತಾಯಿಸಿದರು.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮ ಗ್ರಾಮೀಣ ವ್ಯಾಪ್ತಿಯ ಕುಣಿಗಲ್ ಕ್ಷೇತ್ರದಲ್ಲಿಯೇ ಸಾಕಷ್ಟು ಗೊಂದಲಗಳು ಕಂಡುಬಂದಿವೆ ಎಂದು ಹೇಳಿದರು.
“ಕುಣಿಗಲ್ ಕ್ಷೇತ್ರದಲ್ಲಿ ಸುಮಾರು 2.5 ಲಕ್ಷ ಮತದಾರರಿದ್ದಾರೆ. ಆದರೆ ಡಿಜಿಟಲ್ ದಾಖಲೆಯಲ್ಲಿ ಕೇವಲ 1.2 ಲಕ್ಷ ಮತದಾರರ ಮಾಹಿತಿ ಮಾತ್ರ ಕಾಣಿಸುತ್ತಿದೆ. ಸುಮಾರು 17 ಸಾವಿರ ಮತದಾರರ ಹೆಸರುಗಳು ನ್ಯೂನತೆ ಪಟ್ಟಿಗೆ ಸೇರಿವೆ. ಮತ್ತೊಂದು 17 ಸಾವಿರ ಮತದಾರರ ವಿವರಗಳು ASDDO ಪಟ್ಟಿಗೆ ಹೋಗಿವೆ. ಸುಮಾರು 34 ಸಾವಿರ ಮತದಾರರ ಮಾಹಿತಿಯೇ ಗೊಂದಲದಲ್ಲಿದೆ. ಒಂದೇ ಕ್ಷೇತ್ರದಲ್ಲಿ ಇಷ್ಟೊಂದು ಸಮಸ್ಯೆ ಇದ್ದರೆ, ರಾಜ್ಯದಾದ್ಯಂತ ಪರಿಸ್ಥಿತಿ ಹೇಗಿರಬಹುದು ಎಂಬುದು ಆತಂಕಕಾರಿ,” ಎಂದು ಹೇಳಿದರು.
ರಾಜ್ಯದಲ್ಲಿ ಸುಮಾರು ಒಂದು ಕೋಟಿ ಮತದಾರರ ಮಾಹಿತಿಯೇ ಅಲಭ್ಯವಾಗಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಅವರು, ಈ ಕುರಿತು ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಲಾಗುವುದು ಎಂದರು. ತಳಮಟ್ಟದಲ್ಲಿರುವ ತಾಂತ್ರಿಕ ಹಾಗೂ ಆಡಳಿತಾತ್ಮಕ ಸಮಸ್ಯೆಗಳನ್ನು ತಕ್ಷಣ ಗುರುತಿಸಿ ಸರಿಪಡಿಸಬೇಕು. ಇಲ್ಲವಾದರೆ ಮತದಾರರ ಮತದಾನದ ಹಕ್ಕಿಗೆ ಧಕ್ಕೆಯಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಿದರು.
ಹೆಸರು ನೋಂದಣಿಯಲ್ಲೂ ಗೊಂದಲ
ಮತದಾರರ ವಿವರಗಳ ನೋಂದಣಿಯಲ್ಲಿ ಸಂಬಂಧಿಕರ ಹೆಸರಿನ ದಾಖಲಾತಿಯಲ್ಲಿಯೂ ಗೊಂದಲ ಉಂಟಾಗಿದೆ ಎಂದು ಆರೋಪಿಸಿದ ಶಾಸಕ ರಂಗನಾಥ್, “ತಂದೆ-ತಾಯಿಯ ಹೆಸರು ದಾಖಲಿಸಬೇಕಾದಲ್ಲಿ ಚಿಕ್ಕಮ್ಮ, ದೊಡ್ಡಮ್ಮ ಸೇರಿದಂತೆ ಇತರ ಸಂಬಂಧಿಕರ ಹೆಸರುಗಳನ್ನೂ ದಾಖಲಿಸಲಾಗುತ್ತಿದೆ. ಇದರಿಂದ ಅನಗತ್ಯ ಗೊಂದಲ ಸೃಷ್ಟಿಯಾಗಿದೆ. ಕೆಲವೆಡೆ ಶಿವಮೊಗ್ಗದ ಮತದಾರರ ಮಾಹಿತಿ ಕುಣಿಗಲ್ ಕ್ಷೇತ್ರದಲ್ಲಿ ಕಾಣಿಸುತ್ತಿದೆ. ಇದು ತಾಂತ್ರಿಕ ದೋಷವೋ ಅಥವಾ ಬೇರೆ ಕಾರಣವೋ ಎಂಬುದನ್ನು ಚುನಾವಣಾ ಆಯೋಗ ಸ್ಪಷ್ಟಪಡಿಸಬೇಕು,” ಎಂದು ಹೇಳಿದರು.
ಕೆಲವರು ಎಣಿಕೆ (Enumeration) ನಮೂನೆಗಳನ್ನು ಪಡೆದಿಲ್ಲ, ಕೆಲವರು ಪಡೆದರೂ ಭರ್ತಿ ಮಾಡಲು ಸಾಧ್ಯವಾಗುತ್ತಿಲ್ಲ, ಮತ್ತೆ ಕೆಲವರು ಭರ್ತಿ ಮಾಡಿದರೂ ಸಲ್ಲಿಸಲು ತೊಂದರೆ ಅನುಭವಿಸುತ್ತಿದ್ದಾರೆ. ವ್ಯವಸ್ಥೆಯಲ್ಲಿ ತಾಂತ್ರಿಕ ಅಡಚಣೆಗಳು ಇರುವುದರಿಂದ ಕನಿಷ್ಠ 10 ದಿನಗಳ ಕಾಲಾವಕಾಶ ನೀಡಿ ಎಲ್ಲ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಅವರು ಆಗ್ರಹಿಸಿದರು.
ಕೇಂದ್ರ ಸರ್ಕಾರ ಚುನಾವಣಾ ಆಯೋಗವನ್ನು ಬಳಸಿಕೊಂಡು ಹಿಂಬಾಗಿಲ ಮೂಲಕ ಚುನಾವಣೆಯಲ್ಲಿ ಗೆಲ್ಲುವ ತಂತ್ರ ಅನುಸರಿಸುತ್ತಿದೆ ಎಂಬ ಅನುಮಾನ ಸಾರ್ವಜನಿಕರಲ್ಲಿ ವ್ಯಕ್ತವಾಗುತ್ತಿದೆ ಎಂದು ಶಾಸಕ ಡಾ. ರಂಗನಾಥ್ ಆರೋಪಿಸಿದರು.




