Political News: ಕಾವೇರಿ ಜಲ ವಿವಾದ ಮತ್ತು ಹಲವು ವಿಷಯಗಳ ಬಗ್ಗೆ ರಾಜ್ಯ ಸರ್ಕಾರದ ವಿರುದ್ಧ ಜೆಡಿಎಸ್ ಪಾದಯಾತ್ರೆ ನಡೆಸಿದ್ದು, ಈ ಪಾದಯಾತ್ರೆಗೆ ಬಿಜೆಪಿ ನಾಯಕರು ಸಾಥ್ ನೀಡಿದ್ದಾರೆ.
ಪಾದಯಾತ್ರೆ ಸಕ್ಸಸ್ ಆಗಿದ್ದಕ್ಕೆ ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರ್, ಸಹಕರಿಸಿದ ಎಲ್ಲರಿಗೂ ಈ ರೀತಿಯಾಗಿ ಧನ್ಯವಾದ ತಿಳಿಸಿದ್ದಾರೆ.
ಧನ್ಯವಾದಗಳು ಹಾಗೂ ಕೃತಜ್ಞತಾ ಪೂರ್ವಕ ನಮನಗಳು ಬೈರಮಂಗಲ ಮತ್ತು ಬಿಡದಿಯ ನನ್ನ ಪ್ರೀತಿಯ ರೈತ ಬಾಂಧವರೇ, ನಮ್ಮ ಪಕ್ಷದ ನಿಸ್ವಾರ್ಥ ಕಾರ್ಯಕರ್ತರೇ, ಜೊತೆಗೆ ಹೆಗಲಿಗೆ ಹೆಗಲು ಕೊಟ್ಟು ನಡೆದ ಶಾಸಕರೇ, ವಿಧಾನ ಪರಿಷತ್ ಸದಸ್ಯರೇ, ಮಾಜಿ ಸಚಿವರಿಗೆ, ಪ್ರತಿಯೊಂದು ಕ್ಷಣವನ್ನು ನಾಡಿಗೆ ತಲುಪಿಸಿದ ಮಾಧ್ಯಮ ಮಿತ್ರರಿಗೆ ಹಾಗೂ ಸೂಕ್ತ ಸಹಕಾರ ನೀಡಿದ ಪೊಲೀಸ್ ಸಿಬ್ಬಂದಿಗೆ ನನ್ನ ಹೃದಯಪೂರ್ವಕ ಧನ್ಯವಾದಗಳು.
ರೈತನಿಗೆ ಮಳೆ ಎಂದರೆ ಬದುಕಿನ ಭರವಸೆ. ಸುರಿದ ಧಾರಾಕಾರ ಮಳೆ ನಮ್ಮ ಹಾದಿಯಲ್ಲಿ ಆಶೀರ್ವಾದದಂತೆ ಸುರಯಿತೇ ಹೊರತು ನಮ್ಮ ಉತ್ಸಾಹವನ್ನು ಕುಗ್ಗಿಸಲಿಲ್ಲ. ಮಳೆಗೆ ನೆನೆಯುತ್ತಲೇ ನಮ್ಮ ರೈತರು ಮತ್ತು ಕಾರ್ಯಕರ್ತರು ಎದೆಗುಂದದೆ ಮುನ್ನಡೆದರು. ಆದರೆ, ನಮ್ಮ ಈ ಒಗ್ಗಟ್ಟು ಮತ್ತು ಹೋರಾಟದ ಶಕ್ತಿಯನ್ನು ಕಂಡು ಹೆದರಿದ ಸರ್ಕಾರ ಪೊಲೀಸ್ ಬಲ ಬಳಸಿ ನಮ್ಮನ್ನು ಬೆಂಗಳೂರು ಪ್ರವೇಶಿಸದಂತೆ ತಡೆಯುವ ಯತ್ನ ಮಾಡಿತು. ಪ್ರಕೃತಿಯ ಆಶೀರ್ವಾದದ ನಡುವೆಯೂ ಸರ್ಕಾರದ ತಡೆಗೋಡೆಗಳು ಬಂದರೂ ನಮ್ಮನ್ನಾರೂ ಹಿಂದೆ ಸರಿಯುವಂತೆ ಮಾಡಲು ಸಾಧ್ಯವಾಗಲಿಲ್ಲ.
ಈ ಇಡೀ ಯಾತ್ರೆಯ ಅಸಲಿ ಶಕ್ತಿ ಎಂದರೆ ನಮ್ಮ ಪಕ್ಷದ ನಿಸ್ವಾರ್ಥ ಕಾರ್ಯಕರ್ತರು ಮತ್ತು ಸ್ವಯಂಸೇವಕರು. ಮಳೆ, ಅಡೆತಡೆಗಳ ನಡುವೆಯೂ ಪ್ರತಿಯೊಬ್ಬರ ಕಾಳಜಿ ವಹಿಸಿ, ಮಾರ್ಗದಾದ್ಯಂತ ಸಕಲ ವ್ಯವಸ್ಥೆಗಳನ್ನು ರೂಪಿಸಿ ಪಾದಯಾತ್ರೆ ಸುಗಮವಾಗಿ ಸಾಗುವಂತೆ ನೋಡಿಕೊಂಡ ನಿಮ್ಮ ತ್ಯಾಗ ಮತ್ತು ನಿಸ್ವಾರ್ಥ ಶ್ರಮಕ್ಕೆ ಎಷ್ಟು ಧನ್ಯವಾದ ಹೇಳಿದರೂ ಸಾಲದು. ನಿಮ್ಮ ಈ ಬೆಂಬಲವೇ ನನಗೆ ಅತಿದೊಡ್ಡ ಧೈರ್ಯ.
ನಮ್ಮ ಹೋರಾಟದ ದಾರಿ ಇಲ್ಲಿಗೇ ಮುಗಿಯುವುದಿಲ್ಲ. ಸರ್ಕಾರ ನಮ್ಮನ್ನು ಮಧ್ಯದಲ್ಲೇ ತಡೆದಿರಬಹುದು, ಆದರೆ ನಮ್ಮ ನ್ಯಾಯಯುತ ಧ್ವನಿಯನ್ನು ಅಡಗಿಸಲು ಸಾಧ್ಯವಿಲ್ಲ. ರೈತನಿಗೆ ಸಿಗಬೇಕಾದ ಪ್ರತಿಯೊಂದು ಹಕ್ಕು ಮತ್ತು ನ್ಯಾಯ ಸಿಗುವವರೆಗೂ ಈ ಹೋರಾಟ ಮುಂದುವರಿಯುತ್ತದೆ. ಇದು ಮುಗಿದ ಅಧ್ಯಾಯವಲ್ಲ, ಮುಂದಿನ ಹೋರಾಟದ ಆರಂಭ. ಮುಂದಿನ ಹೆಜ್ಜೆ: ಬೃಹತ್ ‘ವಿಧಾನ ಸೌಧ ಚಲೋ’ ಎಂದು ಬರೆದಿರುವ ನಿಖಿಲ್, ಮುಂದಿನ ಪಾದಯಾತ್ರೆಗಾಗಿ ಆಹ್ವಾನಿಸಿದ್ದಾರೆ.




