Hubli News: ಸರ್ಕಾರಿ ಶಾಲೆ ಅಂದ್ರೆ ಮೂಗು ಮುರಿಯೋ ಜನರಿಗೆ ಇದು ಒಂದು ಮಾದರಿ ಶಾಲೆ. ಸುಸಜ್ಜಿತ ಕಟ್ಟಡ, ನೂರಾರು ವಿದ್ಯಾರ್ಥಿಗಳು, ಉತ್ತಮ ಬೋಧನೆ… ಎಲ್ಲವೂ ಇದೆ. ಆದರೆ ಈಗ ಇದೇ ಶಾಲೆಯ ಮಕ್ಕಳ ಆಟದ ಮೈದಾನವನ್ನು ಅಭಿವೃದ್ಧಿ ಹೆಸರಿನಲ್ಲಿ ಹಾಳು ಮಾಡಲಾಗಿದೆ ಎನ್ನುವ ಆರೋಪ ಕೇಳಿಬಂದಿದೆ. ಒಳಚರಂಡಿ ಕಾಮಗಾರಿ ಮುಗಿದು ಮೂರು ತಿಂಗಳು ಕಳೆದರೂ ಮೈದಾನವನ್ನು ಮರು ಅಭಿವೃದ್ಧಿಪಡಿಸದ ಪರಿಣಾಮ, ವಿದ್ಯಾರ್ಥಿಗಳು ಆಟವಾಡುವುದಿರಲಿ, ಶಾಲೆಗೆ ಓಡಾಡುವುದಕ್ಕೂ ಪರದಾಡುವಂತಾಗಿದೆ.
ಒಂದು ಕಾಲದಲ್ಲಿ ಮಕ್ಕಳ ಕ್ರೀಡಾ ಚಟುವಟಿಕೆಗಳಿಂದ ಕಂಗೊಳಿಸುತ್ತಿದ್ದ ಹುಬ್ಬಳ್ಳಿ ತಾಲೂಕಿನ ಗೋಕುಲ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೈದಾನ, ಒಳಚರಂಡಿ ಕಾಮಗಾರಿಯ ಬಳಿಕ ಸಂಪೂರ್ಣ ಹಾಳಾಗಿದೆ. ಕಾಮಗಾರಿ ಮುಗಿದು ಮೂರು ತಿಂಗಳು ಕಳೆದರೂ ಮೈದಾನವನ್ನು ಮೊದಲಿನ ಸ್ಥಿತಿಗೆ ತರದ ಪರಿಣಾಮ, ಮಕ್ಕಳಿಗೆ ಆಟವಾಡುವುದಷ್ಟೇ ಅಲ್ಲದೆ ಬೆಳಗಿನ ಪ್ರಾರ್ಥನೆ ನಡೆಸುವುದಕ್ಕೂ ತೊಂದರೆಯಾಗಿದೆ.
ಶಾಲೆಯ ಮುಖ್ಯ ದ್ವಾರದ ಮುಂದೆಯೇ ತಗ್ಗು ಪ್ರದೇಶ ನಿರ್ಮಾಣವಾಗಿದ್ದು, ಮಳೆ ಬಂದಾಗ ಕೆಸರಿನ ನೀರು ನಿಂತುಕೊಳ್ಳುತ್ತಿದೆ. ಪ್ರತಿದಿನ ಸಮವಸ್ತ್ರ ಧರಿಸಿ ಬರುವ ವಿದ್ಯಾರ್ಥಿಗಳು ಇದೇ ಕೆಸರಿನಲ್ಲಿ ನಡೆದು ತರಗತಿಗೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ನೂರಾರು ವಿದ್ಯಾರ್ಥಿಗಳು ಓದುತ್ತಿರುವ ಶಾಲೆಯಲ್ಲಿ ಕ್ರೀಡಾ ಚಟುವಟಿಕೆಗಳು ಕೂಡ ಸ್ಥಗಿತಗೊಂಡಿವೆ. ವಾರ್ಷಿಕ ಕ್ರೀಡಾಕೂಟಕ್ಕೆ ಸಿದ್ಧತೆ ನಡೆಸಬೇಕಾದ ಮಕ್ಕಳು, ಮೈದಾನವಿಲ್ಲದೆ ಪರದಾಡುವಂತಾಗಿದೆ.
ಈ ಸಮಸ್ಯೆ ಕುರಿತು ಶಾಲಾ ಆಡಳಿತ ಮಂಡಳಿ, ಪೋಷಕರು ಹಾಗೂ ಸ್ಥಳೀಯರು ಹಲವು ಬಾರಿ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ಆರೋಪ ಕೇಳಿಬಂದಿದೆ. ಶಾಲಾ ಮಕ್ಕಳಿಗೆ ಅಗತ್ಯವಿರುವ ಆಟದ ಮೈದಾನವನ್ನು ಕಾಮಗಾರಿಯ ಹೆಸರಿನಲ್ಲಿ ಹಾಳು ಮಾಡಲಾಗಿದ್ದು, ಕಾಮಗಾರಿ ಪೂರ್ಣಗೊಂಡ ಬಳಿಕ ಮೈದಾನವನ್ನು ಸರಿಯಾಗಿ ಅಭಿವೃದ್ಧಿಪಡಿಸಬೇಕಿತ್ತು ಎಂದು ಪೋಷಕರು ಆಗ್ರಹಿಸಿದ್ದಾರೆ.
ಒಂದು ಕಡೆ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಹೆಚ್ಚಿಸಲು ಸರ್ಕಾರ ಹಲವು ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಮತ್ತೊಂದು ಕಡೆ ಮಕ್ಕಳಿಗೆ ಅಗತ್ಯವಿರುವ ಮೂಲಸೌಕರ್ಯವೇ ಸಮಸ್ಯೆಯಾಗಿರುವ ಆರೋಪ ಕೇಳಿಬರುತ್ತಿದೆ. ಹೀಗಾಗಿ ಗೋಕುಲ ಗ್ರಾಮದ ಸರ್ಕಾರಿ ಶಾಲೆಯ ಮೈದಾನವನ್ನು ತಕ್ಷಣ ಸಮತಟ್ಟು ಮಾಡಿ, ಮಕ್ಕಳ ಆಟ ಹಾಗೂ ಪಠ್ಯೇತರ ಚಟುವಟಿಕೆಗಳಿಗೆ ಮುಕ್ತಗೊಳಿಸಬೇಕಿದೆ. ಮಕ್ಕಳ ಸುರಕ್ಷತೆ ಹಾಗೂ ಭವಿಷ್ಯದ ದೃಷ್ಟಿಯಿಂದ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕಿದೆ.
— ಕ್ಯಾಮೆರಾಮ್ಯಾನ್ ಹೇಮಂತ್ ಜೊತೆ, ಸಂಗಮೇಶ, ಕರ್ನಾಟಕ ಟಿವಿ, ಹುಬ್ಬಳ್ಳಿ.




