Dharwad News: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಧಾರವಾಡದಲ್ಲಿ ಪ್ರತಿಭಟನೆಗೆ ಮುಂದಾಗಿದ್ದ ಆಕ್ಸಾ ಸಂಘಟನೆ ಮುಖಂಡ ಕಾಂತಕುಮಾರ್ ಸೇರಿದಂತೆ 10 ಜನರನ್ನು ಪೊಲೀಸರು ಮುನ್ನೆಚ್ಚರಿಕಾ ಕ್ರಮವಾಗಿ ವಶಕ್ಕೆ ಪಡೆದಿದ್ದಾರೆ. ಧಾರವಾಡದಿಂದ ಕಾಂತಕುಮಾರ್ ಅವರನ್ನು ಹುಬ್ಬಳ್ಳಿಯ ಹಳೇ ಸಿಎಆರ್ ಮೈದಾನಕ್ಕೆ ಕರೆತಂದು, ಬಳಿಕ ಬೇರೆಡೆಗೆ ಸ್ಥಳಾಂತರಿಸಲಾಗಿದೆ. ಹಿಂದೆ ಆಕ್ಸಾ ಸಂಘಟನೆ ನಡೆಸಿದ್ದ ಪ್ರತಿಭಟನೆ ವೇಳೆ ಅಹಿತಕರ ಘಟನೆಗಳು ನಡೆದಿದ್ದ ಹಿನ್ನೆಲೆಯಲ್ಲಿ ಈ ಬಾರಿಯ ಪ್ರತಿಭಟನೆಗೆ ಪೊಲೀಸರು ಅನುಮತಿ ನೀಡಿರಲಿಲ್ಲ. ಆದರೂ ಪ್ರತಿಭಟನೆ ನಡೆಸುವುದಾಗಿ ಸಂಘಟನೆ ತಿಳಿಸಿದ್ದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
ಧಾರವಾಡದಿಂದ ಕಾಂತಕುಮಾರ್ ಅವರನ್ನು ಹುಬ್ಬಳ್ಳಿಯ ಹಳೇ ಸಿಎಆರ್ ಮೈದಾನದಲ್ಲಿರುವ ಪೊಲೀಸ್ ಕಚೇರಿಗೆ ಕರೆತರಲಾಗಿತ್ತು. ಬಳಿಕ ಅವರನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ. ಪೊಲೀಸ್ ವಶದಲ್ಲಿದ್ದ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಕಾಂತಕುಮಾರ್, ವಿದ್ಯಾರ್ಥಿಗಳ ತಂಟೆಗೆ ಬಂದರೆ ಯಾರನ್ನೂ ಬಿಡುವುದಿಲ್ಲ ಎಂದು ಹೇಳಿದ್ದಾರೆ.
ಕೆಪಿಎಸ್‌ಸಿ ಹಗರಣದ ತನಿಖೆಗೆ ಆಗ್ರಹಿಸಿ ಜುಲೈ 28ರಂದು ಜಾರಿ ನಿರ್ದೇಶನಾಲಯಕ್ಕೆ ದೂರು ನೀಡಿದ್ದೆವು. ಇದೀಗ ದಾಳಿ ನಡೆದಿದ್ದು, ನಮ್ಮ ಹೋರಾಟಕ್ಕೆ ಆರಂಭಿಕ ಜಯ ಸಿಕ್ಕಂತಾಗಿದೆ. ದಾಳಿ ನಡೆದಿರುವ ಎಲ್ಲರ ವಿರುದ್ಧ ತನಿಖೆ ನಡೆಸಿ, ತಪ್ಪಿತಸ್ಥರಾಗಿದ್ದರೆ ಜೈಲಿಗೆ ಹಾಕಬೇಕು. ನಮ್ಮ ಹೋರಾಟ ಮುಂದುವರಿಯಲಿದೆ.
ಕೆಪಿಎಸ್‌ಸಿ ಹಗರಣದ ತನಿಖೆ ಹಾಗೂ ಖಾಲಿ ಹುದ್ದೆಗಳ ಭರ್ತಿಗೆ ಆಗ್ರಹಿಸಿ ಹೋರಾಟ ಮುಂದುವರಿಸುವುದಾಗಿ ಆಕ್ಸಾ ಸಂಘಟನೆ ಅಧ್ಯಕ್ಷ ಕಾಂತಕುಮಾರ್ ತಿಳಿಸಿದ್ದಾರೆ.




