Haveri News: ಹಾನಗಲ್ ತಾಲೂಕಿನ ಆರೋಗೊಪ್ಪ ಗ್ರಾಮದಲ್ಲಿ ಹದಗೆಟ್ಟ ರಸ್ತೆಯಿಂದ ಅಂಗನವಾಡಿ ಮಕ್ಕಳು ಪರದಾಡುವಂತಾಗಿದೆ.
ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಮಕ್ಕಳು ಗ್ರಾಮದಲ್ಲಿ ಮೆರವಣಿಗೆ ನಡೆಸುತ್ತಿದ್ದ ವೇಳೆ, ಎರಡನೇ ಅಂಗನವಾಡಿಗೆ ತೆರಳುವ ರಸ್ತೆಯ ದುಸ್ಥಿತಿ ಬೆಳಕಿಗೆ ಬಂದಿದೆ. ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಮಕ್ಕಳು ಪ್ರತಿದಿನ ಅಂಗನವಾಡಿಗೆ ಹೋಗಿ ಬರಲು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.
ರಸ್ತೆ ದುರಸ್ತಿ ಮಾಡುವಂತೆ ಗ್ರಾಮಸ್ಥರು ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಾಗೂ ಪಿಡಿಓ ಅವರಿಗೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದ್ದಾರೆ. ಸಂಬಂಧಪಟ್ಟ ಮೇಲಧಿಕಾರಿಗಳ ಗಮನಕ್ಕೂ ತಂದರೂ ಸಮಸ್ಯೆ ಬಗೆಹರಿದಿಲ್ಲ ಎನ್ನಲಾಗಿದೆ.
ಹದಗೆಟ್ಟ ರಸ್ತೆಯಲ್ಲಿ ನೀರು ನಿಂತು ಕೆಸರುಮಯವಾಗಿರುವುದರಿಂದ, ಗ್ರಾಮಸ್ಥರು ರಸ್ತೆಯಲ್ಲೇ ಭತ್ತದ ನಾಟಿ ಮಾಡುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶ ಹೊರಹಾಕಿದರು. ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಗ್ರಾಮಸ್ಥರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
“ಅಧಿಕಾರಿಗಳಿಗೆ ಮನವಿ ಮಾಡಿ ಮಾಡಿ ಸಾಕಾಗಿದೆ. ಇನ್ನು ಉಳಿದಿರುವುದು ಗ್ರಾಮ ಪಂಚಾಯಿತಿಗೆ ಬೀಗ ಹಾಕುವುದೊಂದೇ” ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಕ್ಕಳ ಸುರಕ್ಷತೆ ಹಾಗೂ ಸಂಚಾರದ ದೃಷ್ಟಿಯಿಂದ ಕೂಡಲೇ ರಸ್ತೆಯನ್ನು ದುರಸ್ತಿ ಮಾಡಬೇಕು. ಇಲ್ಲವಾದಲ್ಲಿ ಗ್ರಾಮಸ್ಥರು ಉಗ್ರ ಹೋರಾಟಕ್ಕೆ ಮುಂದಾಗುವ ಎಚ್ಚರಿಕೆ ನೀಡಿದ್ದಾರೆ.




