ಮಹಿಳಾ ಮೀಸಲಾತಿ ಮಸೂದೆಗೆ ಡಿಲಿಮಿಟೇಶನ್ ಲಿಂಕ್ – ಕೇಂದ್ರದ ವಿರುದ್ಧ ಸಂತೋಷ್ ಲಾಡ್ ಕಿಡಿ!

ಮಹಿಳಾ ಮೀಸಲಾತಿ ಮಸೂದೆಯನ್ನು ಡಿಲಿಮಿಟೇಶನ್‌ಗೆ ಲಿಂಕ್ ಮಾಡಿ ಕೇಂದ್ರ ಸರ್ಕಾರ ಕಾಲಹರಣ ಮಾಡುತ್ತಿದೆ ಎಂದು ಸಚಿವ ಸಂತೋಷ್ ಲಾಡ್ ತೀವ್ರವಾಗಿ ಕಿಡಿಕಾರಿದ್ದಾರೆ. ಧಾರವಾಡದಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿ ಹಾಗೂ ಬಿಜೆಪಿ ಸರ್ಕಾರದ ನೀತಿಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಹೌದು, ಯುಪಿಎ ಸರ್ಕಾರದ ಕಾಲದಲ್ಲೇ ಮಹಿಳಾ ಮೀಸಲಾತಿ ಮಸೂದೆ ಪಾಸಾಗಬೇಕಿತ್ತು, ಆದರೆ ಅಂದು ರಾಜ್ಯಸಭೆಯಲ್ಲಿ ಸ್ಪಷ್ಟ ಬಹುಮತವಿರಲಿಲ್ಲ. ಆದರೆ ಈಗ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಇಷ್ಟು ವರ್ಷಗಳಾದರೂ, ಮಹಿಳಾ ಬಿಲ್ ಅನ್ನು ಡಿಲಿಮಿಟೇಶನ್‌ಗೆ ಲಿಂಕ್ ಮಾಡಿ ಕಾಲಹರಣ ಮಾಡಲಾಗುತ್ತಿದೆ ಎಂದು ಸಂತೋಷ್ ಲಾಡ್ ಆರೋಪಿಸಿದ್ದಾರೆ.

ದೇಶದಲ್ಲಿ ಇಷ್ಟು ವರ್ಷಗಳಿಂದ ಜನಗಣತಿಯೇ ಪೆಂಡಿಂಗ್‌ನಲ್ಲಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದ ಅವರು, ಪ್ರಧಾನಿ ಮೋದಿ ಅವರು ಸಾಫ್ಟ್‌ವೇರ್ ಬಗ್ಗೆ ಭಾಷಣ ಮಾಡುತ್ತಾರೆ, ಆದರೆ ಕನಿಷ್ಠ ಜನಗಣತಿ ನಡೆಸಲು ಇವರಿಂದ ಸಾಧ್ಯವಾಗಿಲ್ಲ ಎಂದು ವಾಗ್ದಾಳಿ ನಡೆಸಿದರು. ತಮ್ಮ ವಿರೋಧವು ಯಾವುದೇ ವೈಯಕ್ತಿಕವಲ್ಲ, ಸಂಪೂರ್ಣವಾಗಿ ವೈಚಾರಿಕವಾದದ್ದು ಎಂದು ಸ್ಪಷ್ಟಪಡಿಸಿದ ಸಚಿವರು, ಮಹಿಳಾ ಮೀಸಲಾತಿ ಮಸೂದೆಯನ್ನು ಯಾವುದೇ ಲಿಂಕ್ ಮಾಡದೆ ತಕ್ಷಣವೇ ಜಾರಿಗೆ ತರಬೇಕು ಎಂದು ಆಗ್ರಹಿಸಿದರು.

ಇದೇ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಅಸಮಾಧಾನದ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಸಿದ್ದರಾಮಯ್ಯ ಅವರಿಗೆ ಯಾವುದೇ ಮುನಿಸಿಲ್ಲ, ಆದರೆ ಬಿಜೆಪಿಯ ಹಿರಿಯ ನಾಯಕ ಎಲ್.ಕೆ. ಅದ್ವಾನಿ ಅವರೇ ನಿಜವಾಗಿ ಮುನಿಸಿಕೊಂಡಿದ್ದಾರೆ. ಬಿಜೆಪಿ ಕಟ್ಟಿದ ಭೀಷ್ಮ ಎನ್ನಿಸಿಕೊಳ್ಳುವ ಅದ್ವಾನಿ ಅವರ ಕನಿಷ್ಠ ಒಂದು ಪಾಸ್‌ಪೋರ್ಟ್ ಸೈಜ್ ಫೋಟೋ ಕೂಡ ಈಗ ಬಿಜೆಪಿಯಲ್ಲಿ ಕಾಣಿಸುತ್ತಿಲ್ಲ ಎಂದು ಲೇವಡಿ ಮಾಡಿದರು.

ಇನ್ನು ಸಚಿವ ಜಮೀರ್ ಅಹ್ಮದ್ ಅವರ ಪತ್ರದ ವಿಚಾರವಾಗಿ ಮಾತನಾಡಿ, ಕೆಲಸದ ಒತ್ತಡದಿಂದ ಅವರು ಪತ್ರ ಬರೆದಿರುವುದು ನಿಜ. ಆದರೆ ಜಮೀರ್ ಪತ್ರದ ಜೊತೆಗೆ ಮೋದಿ ಅವರ ಮುಂದೆ ಹನುಮಂತ ಹಾಗೂ ದೇವಿಯರ ವೇಷಧಾರಿಗಳು ಡ್ಯಾನ್ಸ್ ಮಾಡಿರುವುದೂ ಕೂಡ ಚರ್ಚೆಯಾಗಲಿ ಎಂದು ತಿರುಗೇಟು ನೀಡಿದರು.

About The Author