ಬಿಡದಿ ಟೌನ್‌ಶಿಪ್‌ಗೆ JDS ವಿರೋಧ – ದಳಪತಿಗಳಿಂದ ‘ವಿಧಾನಸೌಧ ಚಲೋ’!

ರಾಜ್ಯ ರಾಜಕಾರಣದಲ್ಲಿ ಮತ್ತೊಮ್ಮೆ ಕಾವೇರಿದೆ ಬದ್ಧವೈರಿಗಳ ಜಟಾಪಟಿ. ಕಾಂಗ್ರೆಸ್ ಸರ್ಕಾರದ ಪ್ರಸ್ತಾವಿತ ಬಿಡದಿ ಟೌನ್‌ಶಿಪ್‌ ಯೋಜನೆ ಹಾಗೂ ಭೂಸ್ವಾಧೀನ ಪ್ರಕ್ರಿಯೆಯನ್ನು ವಿರೋಧಿಸಿ ಜೆಡಿಎಸ್ ಪಕ್ಷದಿಂದ ಬೆಂಗಳೂರಿನಲ್ಲಿ ಇಂದು ಬೃಹತ್ ಪ್ರತಿಭಟನೆ ಮತ್ತು ‘ವಿಧಾನಸೌಧ ಚಲೋ’ ಹಮ್ಮಿಕೊಳ್ಳಲಾಗಿತ್ತು. ಫ್ರೀಡಂ ಪಾರ್ಕ್‌ನಲ್ಲಿ ನಡೆದ ಈ ಪ್ರತಿಭಟನೆಯಲ್ಲಿ ದಳಪತಿಗಳು ಸರ್ಕಾರದ ವಿರುದ್ಧ ರಣಕಹಳೆ ಮೊಳಗಿಸಿದ್ದಾರೆ.

ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ, ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ, ಹಾಗೂ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸೇರಿದಂತೆ ಪಕ್ಷದ ಎಲ್ಲಾ ಶಾಸಕರು, ವಿಧಾನ ಪರಿಷತ್ ಸದಸ್ಯರು ಹಾಗೂ ಹಿರಿಯ ನಾಯಕರು ಈ ಪ್ರತಿಭಟನೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ರಾಜ್ಯ ಸರ್ಕಾರದ ರೈತ ವಿರೋಧಿ ನೀತಿಗಳ ವಿರುದ್ಧ ನಾಯಕರು ತೀವ್ರವಾಗಿ ಗುಡುಗಿದರು.

ಫ್ರೀಡಂ ಪಾರ್ಕ್‌ನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಜೆಡಿಎಸ್ ಕಾರ್ಯಕರ್ತರು, ರೈತರು ಹಾಗೂ ಬೆಂಬಲಿಗರು ಸೇರಿದಂತೆ ಬರೋಬ್ಬರಿ 4,000ದಿಂದ 5,000ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು. ಬಿಡದಿ ಟೌನ್‌ಶಿಪ್‌ಗಾಗಿ ರೈತರ ಭೂಮಿಯನ್ನು ವಶಪಡಿಸಿಕೊಳ್ಳುವ ಸರ್ಕಾರದ ಕ್ರಮಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ನಮ್ಮ ಭೂಮಿ ನಮಗೆ ಬಿಟ್ಟುಕೊಡಬೇಕೆಂದು ಆಗ್ರಹಿಸಿದರು.

ಕಾಂಗ್ರೆಸ್ ಸರ್ಕಾರದ ಈ ಮಹತ್ವಾಕಾಂಕ್ಷಿ ಟೌನ್‌ಶಿಪ್ ಯೋಜನೆಯಿಂದ ಸಾವಿರಾರು ರೈತರು ಬೀದಿಗೆ ಬೀಳುವಂತಾಗುತ್ತದೆ ಎಂದು ಎಚ್.ಡಿ. ಕುಮಾರಸ್ವಾಮಿ ಸೇರಿದಂತೆ ಇತ್ತೀಚಿನ ನಾಯಕರು ಆರೋಪಿಸಿದ್ದಾರೆ. ರೈತರ ಭೂಮಿ ಕಿತ್ತುಕೊಂಡು ಕಾರ್ಪೊರೇಟ್ ಕಂಪನಿಗಳಿಗೆ ಒಪ್ಪಿಸಲು ಹೊರಟಿರುವ ಸರ್ಕಾರದ ಹುನ್ನಾರವನ್ನು ಯಾವುದೇ ಕಾರಣಕ್ಕೂ ಯಶಸ್ವಿಗೊಳಿಸಲು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

ಬಿಡದಿ ಟೌನ್‌ಶಿಪ್ ವಿಚಾರವನ್ನು ಮುಂದಿಟ್ಟುಕೊಂಡು ಜೆಡಿಎಸ್ ನಡೆಸಿರುವ ಈ ಹೋರಾಟವು ಮುಂದಿನ ದಿನಗಳಲ್ಲಿ ಯಾವ ರಾಜಕೀಯ ತಿರುವು ಪಡೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.

About The Author