Political News: ಕೆಲ ದಿನಗಳ ಹಿಂದೆ ಗೃಹಲಕ್ಷ್ಮೀ ಯೋಜನೆಯಲ್ಲಿ ಮೋಸವಾಗುತ್ತಿದ್ದು, ಮೃತರ ಹೆಸರಿನಲ್ಲೂ ಗೃಹಲಕ್ಷ್ಮೀ ದುಡ್ಡು ಪಡೆಯಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿತ್ತು. ಹಾಗಾಗಿ ಯೋಜನೆ ಪರಿಷ್ಕರಣೆ ಮಾಡಲಾಗಿತ್ತು. ಇದೀಗ ಜೀವಂತ ಇರುವ ಮಹಿಳೆಯರನ್ನೂ ಮೃತರು ಎಂದು ಘೋಷಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಈ ವಿಚಾರವಾಗಿ ಎಕ್ಸ್ ಖಾತೆಯ ಮೂಲಕ ಧ್ವನಿ ಎತ್ತಿರುವ ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಜೀವಂತ ತಾಯಂದಿರನ್ನೇ ಸರ್ಕಾರಿ ದಾಖಲೆಗಳಲ್ಲಿ ‘ಮೃತರು’ ಎಂದು ಘೋಷಿಸಿದ ಈ ಕಾಂಗ್ರೆಸ್ ಸರ್ಕಾರಕ್ಕೆ ಮಾನ, ಮರ್ಯಾದೆ ಇದೆಯೇ?! 184 ಬಡ ಮಹಿಳೆಯರನ್ನು ಬದುಕಿದ್ದೂ ಸತ್ತವರೆಂದು ದಾಖಲಿಸಿ, ಅವರಿಗೆ ಸಲ್ಲಬೇಕಾದ ಗೃಹಲಕ್ಷ್ಮಿ ಹಣವನ್ನೇ ಕಸಿದುಕೊಂಡಿರುವ ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯಕ್ಕೆ ಇದಕ್ಕಿಂತ ದೊಡ್ಡ ಸಾಕ್ಷಿ ಬೇಕೇ? ಎಂದು ಪ್ರಶ್ನಿಸಿದ್ದಾರೆ.
ಹಾವೇರಿ, ಗದಗ, ಧಾರವಾಡ, ಬೆಳಗಾವಿ, ಬಾಗಲಕೋಟೆ, ವಿಜಯಪುರ ಹಾಗೂ ಉತ್ತರ ಕನ್ನಡ ಜಿಲ್ಲೆಗಳ 184 ಮಹಿಳೆಯರು ಇ-ಜನ್ಮ (e-Janma) ಪೋರ್ಟಲ್ನ ಎಡವಟ್ಟಿನಿಂದ ಸರ್ಕಾರಿ ದಾಖಲೆಗಳಲ್ಲಿ ‘ಮೃತರು’ ಎಂದು ದಾಖಲಾಗಿದ್ದಾರೆ. ಪರಿಣಾಮ, ಕಳೆದ ಒಂದು ವರ್ಷದಿಂದ ಗೃಹಲಕ್ಷ್ಮಿ ಯೋಜನೆಯ ಹಣವಿಲ್ಲದೆ ಪರದಾಡುತ್ತಿದ್ದಾರೆ. ಬದುಕಿದ್ದೇವೆ ಎಂದು ಸಾಬೀತುಪಡಿಸಲು ಸರ್ಕಾರಿ ಕಚೇರಿಗಳಿಗೆ ಅಲೆಯುವ ದುರವಸ್ಥೆಗೆ ತಳ್ಳಲ್ಪಟ್ಟಿದ್ದಾರೆ ಎಂದು ಆರ್.ಅಶೋಕ್ ಕಾಂಗ್ರೆಸ್ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೇ, ನ್ಯಾಯಬೆಲೆ ಅಂಗಡಿಗಳಲ್ಲಿ ಬೆರಳಚ್ಚು ನೀಡಿ ಪಡಿತರ ಪಡೆಯುತ್ತಿರುವ, ಪ್ರತಿದಿನ ದುಡಿದು ಬದುಕುತ್ತಿರುವ ಮಹಿಳೆಯರು ನಿಮ್ಮ ಸರ್ಕಾರದ ದಾಖಲೆಗಳಲ್ಲಿ ಮಾತ್ರ ಸತ್ತಿದ್ದಾರೆ! ಇದೇನಾ ನಿಮ್ಮ ಪಾರದರ್ಶಕ ಆಡಳಿತ? ಇದೇನಾ ನಿಮ್ಮ ಜನಪರ ಆಡಳಿತದ ಮಾದರಿ? ಎಂದು ಕಾಂಗ್ರೆಸ್ ಸರ್ಕಾರವನ್ನು ಆರ್.ಅಶೋಕ್ ಪ್ರಶ್ನಿಸಿದ್ದಾರೆ.
ಚುನಾವಣೆಗೂ ಮುನ್ನ ಮನೆಮನೆಗೆ ತೆರಳಿ ಗ್ಯಾರಂಟಿ ಕಾರ್ಡ್ ನೀಡಿ ಮತ ಕೇಳಿದ ನಿಮಗೆ, ಅಧಿಕಾರ ಸಿಕ್ಕಿದ ಮೇಲೆ ಅದೇ ಬಡ ತಾಯಂದಿರ ಕಷ್ಟ ಕಾಣಿಸುತ್ತಿಲ್ಲವೇ? ಗ್ಯಾರಂಟಿಗಳ ಹೆಸರಿನಲ್ಲಿ ಪ್ರಚಾರ ಗಿಟ್ಟಿಸಿಕೊಂಡ ನಿಮ್ಮ ಕಾಂಗ್ರೆಸ್ ಸರ್ಕಾರಕ್ಕೆ, ಫಲಾನುಭವಿಗಳ ಸಂಕಷ್ಟ ಪರಿಹರಿಸುವ ಕನಿಷ್ಠ ಜವಾಬ್ದಾರಿಯೂ ಇಲ್ಲವೇ? ಅಧಿಕಾರಿಗಳು ‘ನೀವು ಬದುಕಿದ್ದೀರಿ ಎಂಬುದಕ್ಕೆ ಪ್ರಮಾಣಪತ್ರ ತನ್ನಿ’ ಎಂದು ಹೇಳುವ ಮಟ್ಟಿಗೆ ಆಡಳಿತ ಯಂತ್ರ ಕುಸಿದಿದೆ. ಗ್ಯಾರಂಟಿ ಅನುಷ್ಠಾನ ಸಮಿತಿಗಳು ಏನು ಮಾಡುತ್ತಿವೆ? ಸಂಬಂಧಪಟ್ಟ ಸಚಿವರು ಮತ್ತು ಅಧಿಕಾರಿಗಳು ಯಾರ ಹಿತ ಕಾಯುತ್ತಿದ್ದಾರೆ?
ಇದು ಕೇವಲ ತಾಂತ್ರಿಕ ದೋಷವಲ್ಲ; 184 ಬಡ ಮಹಿಳೆಯರ ಬದುಕು ಮತ್ತು ಅವರ ಹಕ್ಕುಗಳ ಮೇಲೆ ನಡೆದಿರುವ ಆಡಳಿತಾತ್ಮಕ ದೌರ್ಜನ್ಯ.
ನಮ್ಮ ಆಗ್ರಹ ಸ್ಪಷ್ಟವಾಗಿದೆ: 1. ತಕ್ಷಣವೇ 184 ಮಹಿಳೆಯರ ದಾಖಲೆಗಳಲ್ಲಿನ ತಪ್ಪುಗಳನ್ನು ಸರಿಪಡಿಸಿ, ಅವರ ಜೀವಂತಿಕೆಯ ಅಧಿಕೃತ ದಾಖಲೆಯನ್ನು ಪುನಃಸ್ಥಾಪಿಸಬೇಕು.
2. ಕಳೆದ ಒಂದು ವರ್ಷದಿಂದ ಬಾಕಿ ಉಳಿದಿರುವ ಗೃಹಲಕ್ಷ್ಮಿ ಯೋಜನೆಯ ಸಂಪೂರ್ಣ ಹಣವನ್ನು ತಕ್ಷಣವೇ ಬಿಡುಗಡೆ ಮಾಡಬೇಕು.
3. ಈ ಗಂಭೀರ ಲೋಪಕ್ಕೆ ಕಾರಣರಾದ ಅಧಿಕಾರಿಗಳ ಹೊಣೆಗಾರಿಕೆ ನಿಗದಿಪಡಿಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು.
ಬದುಕಿರುವ ತಾಯಂದಿರನ್ನು ಬದುಕಿದ್ದೇವೆ ಎಂದು ಸಾಬೀತುಪಡಿಸಲು ಅಲೆದಾಡಿಸುವ ಸರ್ಕಾರಕ್ಕೆ ಅಧಿಕಾರದಲ್ಲಿ ಮುಂದುವರಿಯುವ ನೈತಿಕ ಅರ್ಹತೆ ಇದೆಯೇ? ಬಡವರ ಹೆಸರಿನಲ್ಲಿ ಅಧಿಕಾರಕ್ಕೆ ಬಂದು, ಬಡವರನ್ನೇ ಬೀದಿಗೆ ತಳ್ಳುವ ಕಾಂಗ್ರೆಸ್ ಸರ್ಕಾರದ ಈ ಅಮಾನವೀಯತೆಗೆ ಜನರೇ ತಕ್ಕ ಉತ್ತರ ನೀಡಲಿದ್ದಾರೆ. ಈ 184 ತಾಯಂದಿರಿಗೆ ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಆರ್.ಅಶೋಕ್ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.




