ಬಸ್ ಬಿಡಿಭಾಗ ಖರೀದಿಯಲ್ಲಿ ಅಕ್ರಮ – BMTC ಅಧಿಕಾರಿಗಳಿಗೆ ಸಂಕಷ್ಟ!

BMTC ಬಸ್‌ಗಳ ಬಿಡಿ ಭಾಗಗಳ ಖರೀದಿಯಲ್ಲಿ ಭಾರೀ ದೊಡ್ಡ ಗೋಲ್ಮಾಲ್ ನಡೆದಿರೋದು ಈಗ ಅಧಿಕೃತವಾಗಿ ಹೊರಬಿದ್ದಿದೆ! ನಕಲಿ ಬಿಲ್ ಸೃಷ್ಟಿಸಿ ಸಾರ್ವಜನಿಕರ ಹಣವನ್ನು ಲೂಟಿ ಹೊಡೆದಿರುವ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾರಿಗೆ ಸಚಿವ ಬೈರತಿ ಸುರೇಶ್ ಅವರು ಮಹತ್ವದ ಮಾಹಿತಿ ನೀಡಿದ್ದಾರೆ.

ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದ ವೇಳೆ ಕಾಂಗ್ರೆಸ್ ಸದಸ್ಯ ಡಾ. ಗೋವಿಂದ್ ರಾಜ್ ಅವರು ಬಿಎಂಟಿಸಿ ಬಸ್‌ಗಳ ಬಿಡಿ ಭಾಗಗಳ ಖರೀದಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಬಗ್ಗೆ ಸರ್ಕಾರದ ಗಮನ ಸೆಳೆದಿದ್ದರು. ಎಷ್ಟು ಹಣ ದುರ್ಬಳಕೆಯಾಗಿದೆ? ತಪ್ಪಿತಸ್ಥರ ವಿರುದ್ಧ ಏನು ಕ್ರಮ ಕೈಗೊಳ್ಳಲಾಗಿದೆ ಅಂತ ಪ್ರಶ್ನೆ ಮಾಡಿದ್ದರು.

ಇದಕ್ಕೆ ಸಚಿವ ‘ಬೈರತಿ ಸುರೇಶ್’ ಅವರು ನೀಡಿರುವ ಉತ್ತರ ಸದ್ಯ ಭಾರಿ ಚರ್ಚೆಗೆ ಗ್ರಾಸವಾಗಿದೆ! ಅವ್ರು ಹೇಳಿದಂತೆ ‘ಅಕ್ರಮದ ಬಗ್ಗೆ ಮಾಹಿತಿ ಸಿಕ್ಕ ಬೆನ್ನಲ್ಲೇ, ಮಾರ್ಚ್ 27ರಂದೇ ಬರೋಬ್ಬರಿ 5 ಅಧಿಕಾರಿಗಳ ನೇತೃತ್ವದಲ್ಲಿ ಉನ್ನತ ಮಟ್ಟದ ತನಿಖಾ ಸಮಿತಿಯನ್ನು ರಚಿಸಲಾಗಿದೆ. ಹಾಗೇನೇ ಸಮಿತಿ ನೀಡಿದ ಪ್ರಾಥಮಿಕ ವರದಿಯ ಆಧಾರದ ಮೇಲೆ, ಈಗಾಗಲೇ 8 ಜನ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ಅಮಾನತು ಮಾಡಲಾಗಿದೆ ಅಂತ ಪ್ರತಿಕ್ರಿಯೆ ನೀಡಿದರು!

ಅಲ್ಲದೆ, ಈ ತನಿಖಾ ಸಮಿತಿಯು ಅಕ್ಟೋಬರ್ ಅಂತ್ಯದ ವೇಳೆಗೆ ತನ್ನ ಅಂತಿಮ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಿದೆ. ವರದಿ ಕೈ ಸೇರಿದ ಕೂಡಲೇ, ಅಕ್ರಮದಲ್ಲಿ ಭಾಗಿಯಾದವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಠಿಣ ಕಾನೂನು ಕ್ರಮ ಹಾಗೂ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು ಅಂತ ಸಚಿವರು ಸ್ಪಷ್ಟಪಡಿಸಿದ್ದಾರೆ.

ಒಟ್ಟಿನಲ್ಲಿ, ಸಾರ್ವಜನಿಕರ ತೆರಿಗೆ ಹಣವನ್ನು ಕಣ್ಣಿಗೆ ಮಣ್ಣೆರಚಿ ತಿನ್ನುವವರಿಗೆ ಸಾರಿಗೆ ಇಲಾಖೆಯ ಈ ಕ್ರಮ ದೊಡ್ಡ ಶಾಕ್ ಕೊಟ್ಟಿದೆ. ಅಂತಿಮ ವರದಿಯಲ್ಲಿ ಇನ್ನು ಯಾರ್ಯಾರ ಹೆಸರು ಹೊರಬರಲಿದೆ ಎಂಬುದಾಗಿ ಕಾದು ನೋಡಬೇಕು’ ಎಸ್ ‘ಈ ಬಿಎಂಟಿಸಿ ಹಗರಣದ ಬಗ್ಗೆ ನಿಮ್ಮ ಅಭಿಪ್ರಾಯವೇನು? ಕಮೆಂಟ್ ಮಾಡಿ…

About The Author