Haveri News: ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಮಾಸನಕಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೀರಲಗಿ ಗ್ರಾಮದಲ್ಲಿ ವಿಬಿಜಿ ರಾಮಜಿ ಯೋಜನೆಯಡಿ ನಡೆಯುತ್ತಿರುವ ನೀರಲಗಿ ದೊಡ್ಡ ಕೆರೆ ಪುನಶ್ಚೇತನ ಕಾಮಗಾರಿ ಸ್ಥಳಕ್ಕೆ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಡಾ. ಪುನೀತ್ ಅವರು ಅಧಿಕಾರಿಗಳ ತಂಡದೊಂದಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸ್ಥಳಕ್ಕೆ ಭೇಟಿ ನೀಡಿದ ಡಾ. ಪುನೀತ್ ಅವರು ಕೇವಲ ಪರಿಶೀಲನೆಗೆಷ್ಟೇ ಸೀಮಿತವಾಗದೆ, ಕಾಮಗಾರಿಯಲ್ಲಿ ನಿರತರಾಗಿದ್ದ ಕೂಲಿಕಾರರೊಂದಿಗೆ ಸ್ವತಃ ಮಣ್ಣು ಹೊತ್ತು ಶ್ರಮದಾನ ಮಾಡಿದರು. ತಾವೊಬ್ಬ ವೃತ್ತಿಪರ ವೈದ್ಯರೂ ಆಗಿರುವುದರಿಂದ, ಕಾಮಗಾರಿ ಜಾಗದಲ್ಲೇ ಆಯೋಜಿಸಲಾಗಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಕೂಲಿಕಾರರ ರಕ್ತದೊತ್ತಡ ಹಾಗೂ ಆರೋಗ್ಯ ಪರಿಶೀಲನೆ ನಡೆಸಿ, ಕಠಿಣ ಕೆಲಸದ ಜೊತೆಗೆ ತಮ್ಮ ಆರೋಗ್ಯದ ಕಡೆಗೂ ಗಮನ ಹರಿಸುವಂತೆ ಕಿವಿಮಾತು ಹೇಳಿದರು.
ಇಷ್ಟೇ ಅಲ್ಲದೆ, ಕೂಲಿಕಾರರ ಅನುಕೂಲಕ್ಕಾಗಿ ಸ್ಥಳದಲ್ಲೇ ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಯಿತು. ಜಾಬ್ ಕಾರ್ಡ್ ಮೇಳದಡಿ ಹೊಸದಾಗಿ ಅರ್ಹತೆ ಪಡೆದ ಕೂಲಿಕಾರರಿಗೆ ನೂತನ ಉದ್ಯೋಗ ಚೀಟಿಗಳನ್ನು ವಿತರಿಸಲಾಯಿತು. ಜೊತೆಗೆ ವೈಯಕ್ತಿಕ ಕಾಮಗಾರಿಗಳ ಐದು ಫಲಾನುಭವಿಗಳಿಗೆ ಕಾರ್ಯಾದೇಶದ ಪ್ರತಿಗಳನ್ನು ಹಸ್ತಾಂತರಿಸಿದ ಅಧಿಕಾರಿಗಳು, ಶೀಘ್ರವೇ ಕಾಮಗಾರಿ ಆರಂಭಿಸುವಂತೆ ಸೂಚಿಸಿದರು.
ಒಂದೆಡೆ ಆಡಳಿತಾತ್ಮಕ ಕರ್ತವ್ಯ, ಮತ್ತೊಂದೆಡೆ ವೈದ್ಯರಾಗಿ ಕೂಲಿಕಾರರ ಸೇವೆಯಲ್ಲಿ ನಿರತರಾದ ಡಾ. ಪುನೀತ್ ಅವರ ಕಾರ್ಯವೈಖರಿಗೆ ಸ್ಥಳೀಯ ಗ್ರಾಮಸ್ಥರು ಹಾಗೂ ಕೂಲಿಕಾರರು ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಇಒ ಜಗದೀಶ್ ಕಮ್ಮಾರ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯಿತಿ ಸಿಬ್ಬಂದಿ ಉಪಸ್ಥಿತರಿದ್ದರು.
