ಉತ್ತರ ಕರ್ನಾಟಕದ ಜನತೆಗೆ ಸಿಹಿ ಸುದ್ದಿ: ದೆಹಲಿ–ಹುಬ್ಬಳ್ಳಿ ದೈನಂದಿನ ವಿಮಾನ ಸೇವೆ

Hubli News: ಹುಬ್ಬಳ್ಳಿ-ಧಾರವಾಡ ಹಾಗೂ ಉತ್ತರ ಕರ್ನಾಟಕದ ಜನತೆಗೆ ಸಿಹಿ ಸುದ್ದಿ. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಮನವಿ ಮೇರೆಗೆ ಅಕ್ಟೋಬರ್ 1ರಿಂದ ದೆಹಲಿ–ಹುಬ್ಬಳ್ಳಿ ಹಾಗೂ ದೆಹಲಿ–ಬೆಳಗಾವಿ ನಡುವೆ ಪ್ರತಿದಿನ ನೇರ ವಿಮಾನ ಸೇವೆ ಆರಂಭವಾಗಲಿದೆ. ಪ್ರಯಾಣಿಕರ ಅನುಕೂಲ ಹಾಗೂ ಉತ್ತರ ಕರ್ನಾಟಕದ ಜನರ ಬೇಡಿಕೆಗೆ ಸ್ಪಂದಿಸಿರುವ ಇಂಡಿಗೋ ಸಂಸ್ಥೆ ದೈನಂದಿನ ವಿಮಾನ ಸೇವೆ ಆರಂಭಿಸಲು ಮುಂದಾಗಿದೆ.

ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಇತ್ತೀಚೆಗೆ ಇಂಡಿಗೋ ಏರ್‌ಲೈನ್ಸ್ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ, ದೆಹಲಿ–ಹುಬ್ಬಳ್ಳಿ ಹಾಗೂ ದೆಹಲಿ–ಬೆಳಗಾವಿ ನಡುವೆ ದೈನಂದಿನ ನೇರ ವಿಮಾನ ಸೇವೆ ಆರಂಭಿಸುವಂತೆ ಮನವಿ ಮಾಡಿದ್ದರು. ಇದೀಗ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಇಂಡಿಗೋ ಸಂಸ್ಥೆ, ಅಕ್ಟೋಬರ್ 1ರಿಂದ ಸೇವೆ ಆರಂಭಿಸುವುದಾಗಿ ತಿಳಿಸಿದೆ.

ಅಕ್ಟೋಬರ್ 1ರಿಂದ ವಿಮಾನ ಸಂಖ್ಯೆ 6E758 ದೆಹಲಿಯಿಂದ ಸಂಜೆ 4:30ಕ್ಕೆ ಹೊರಟು, ಸಂಜೆ 6:55ಕ್ಕೆ ಹುಬ್ಬಳ್ಳಿ ತಲುಪಲಿದೆ. ಬಳಿಕ 6E2115 ವಿಮಾನ ಹುಬ್ಬಳ್ಳಿಯಿಂದ ಸಂಜೆ 7:30ಕ್ಕೆ ಹೊರಟು, ರಾತ್ರಿ 10:05ಕ್ಕೆ ದೆಹಲಿ ತಲುಪಲಿದೆ.

ಇದೇ ರೀತಿ ದೆಹಲಿ–ಬೆಳಗಾವಿ ನಡುವೆ ಕೂಡ ಪ್ರತಿದಿನ ನೇರ ವಿಮಾನ ಸೇವೆ ಲಭ್ಯವಾಗಲಿದೆ. 6E2511 ವಿಮಾನ ದೆಹಲಿಯಿಂದ ಬೆಳಗ್ಗೆ 6:15ಕ್ಕೆ ಹೊರಟು 8:40ಕ್ಕೆ ಬೆಳಗಾವಿ ತಲುಪಲಿದೆ. 6E2512 ವಿಮಾನ ಬೆಳಗಾವಿಯಿಂದ ಬೆಳಗ್ಗೆ 9:10ಕ್ಕೆ ಹೊರಟು 11:40ಕ್ಕೆ ದೆಹಲಿ ತಲುಪಲಿದೆ.

ವಾರದ ಏಳು ದಿನವೂ ದೆಹಲಿಗೆ ನೇರ ವಿಮಾನ ಸಂಪರ್ಕ ಲಭ್ಯವಾಗುವುದರಿಂದ ಹುಬ್ಬಳ್ಳಿ-ಧಾರವಾಡ ಹಾಗೂ ಉತ್ತರ ಕರ್ನಾಟಕದ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ. ವ್ಯಾಪಾರ, ಉದ್ಯೋಗ, ಶಿಕ್ಷಣ ಮತ್ತು ಪ್ರವಾಸೋದ್ಯಮ ಕ್ಷೇತ್ರಗಳಿಗೂ ಇದರಿಂದ ಮತ್ತಷ್ಟು ಉತ್ತೇಜನ ಸಿಗುವ ನಿರೀಕ್ಷೆಯಿದೆ. ಉತ್ತರ ಕರ್ನಾಟಕದ ಸಂಪರ್ಕ ವ್ಯವಸ್ಥೆ ಬಲಪಡಿಸುವ ನಿಟ್ಟಿನಲ್ಲಿ ಈ ವಿಮಾನ ಸೇವೆ ಮಹತ್ವದ ಹೆಜ್ಜೆಯಾಗಿದೆ.

About The Author