Hubli News: ಬೆಳೆ ರಕ್ಷಣೆಗಾಗಿ ರೈತರು ಬಳಸುವ ಕ್ರಿಮಿನಾಶಕವೇ ಇದೀಗ ಅವರ ಆರೋಗ್ಯಕ್ಕೆ ಅಪಾಯ ತರುತ್ತಿದೆಯಾ ಎಂಬ ಆತಂಕ ಎದುರಾಗಿದೆ. ಹುಬ್ಬಳ್ಳಿ ಕಿಮ್ಸ್ನ ಅಧ್ಯಯನದಲ್ಲಿ ಕ್ರಿಮಿನಾಶಕ ಸಿಂಪಡಿಸಿದ 15 ದಿನಗಳ ಬಳಿಕವೂ ಕೆಲವು ರೈತರ ರಕ್ತದಲ್ಲಿ ಅದರ ಅಂಶ ಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. 13 ರೈತರನ್ನು ಒಳಗೊಂಡ ಈ ಅಧ್ಯಯನ ಇದೀಗ ಚರ್ಚೆಗೆ ಗ್ರಾಸವಾಗಿದೆ.
ಬೆಳೆ ಉಳಿಸಿಕೊಳ್ಳಲು ರೈತರು ನಿತ್ಯ ಕ್ರಿಮಿನಾಶಕ ಸಿಂಪಡಿಸುತ್ತಾರೆ. ಆದರೆ ಇದೇ ರಾಸಾಯನಿಕ ರೈತರ ದೇಹದ ಮೇಲೆ ಬೀರುತ್ತಿರುವ ಪರಿಣಾಮದ ಕುರಿತು ಹುಬ್ಬಳ್ಳಿ ಕಿಮ್ಸ್ ಅಧ್ಯಯನ ನಡೆಸಿದೆ. ಧಾರವಾಡ ಜಿಲ್ಲೆಯ 13 ರೈತರ ರಕ್ತದ ಮಾದರಿಗಳನ್ನು ಸಿಂಪಡಣೆ ಮಾಡಿದ 2ರಿಂದ 15 ದಿನಗಳ ಅವಧಿಯಲ್ಲಿ ಸಂಗ್ರಹಿಸಿ ಪರೀಕ್ಷೆ ನಡೆಸಲಾಗಿದೆ. ಪರೀಕ್ಷೆಯಲ್ಲಿ ಕೆಲವು ರೈತರ ರಕ್ತದಲ್ಲಿ 15 ದಿನಗಳ ಬಳಿಕವೂ ಕ್ರಿಮಿನಾಶಕದ ಅಂಶ ಪತ್ತೆಯಾಗಿದೆ.
ಕ್ರಿಮಿನಾಶಕ ದೇಹದಲ್ಲಿ ಉಳಿಯುವ ಸಾಧ್ಯತೆ ಬಗ್ಗೆ ಅಧ್ಯಯನ ಆತಂಕ ಮೂಡಿಸಿದೆ. ಆದರೆ ಇದು ಸಣ್ಣ ಪ್ರಮಾಣದ ಅಧ್ಯಯನವಾಗಿರುವುದರಿಂದ ಕ್ರಿಮಿನಾಶಕವೇ ನಿರ್ದಿಷ್ಟ ಕಾಯಿಲೆಗೆ ನೇರ ಕಾರಣ ಎಂದು ಹೇಳಲು ಸಾಧ್ಯವಿಲ್ಲ. ಹೆಚ್ಚಿನ ಪ್ರಮಾಣದ ಹಾಗೂ ದೀರ್ಘಾವಧಿಯ ಅಧ್ಯಯನ ಅಗತ್ಯವಿದೆ.
ಕ್ರಿಮಿನಾಶಕ ಸಿಂಪಡಿಸುವಾಗ ರಾಸಾಯನಿಕಗಳು ಉಸಿರಾಟದ ಮೂಲಕ ಹಾಗೂ ಚರ್ಮದ ಸಂಪರ್ಕದಿಂದ ದೇಹ ಸೇರುವ ಸಾಧ್ಯತೆಯಿದೆ. ಹೀಗಾಗಿ ರೈತರು ಮಾಸ್ಕ್, ಗ್ಲೌಸ್ ಹಾಗೂ ಸುರಕ್ಷತಾ ಉಡುಪು ಬಳಸಬೇಕು. ಸಿಂಪಡಣೆ ವೇಳೆ ಆಹಾರ ಸೇವಿಸುವುದನ್ನು ತಪ್ಪಿಸಿ, ಬಳಿಕ ಕೈ-ಮುಖ ಹಾಗೂ ದೇಹವನ್ನು ಚೆನ್ನಾಗಿ ತೊಳೆಯಬೇಕು. ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಕ್ರಿಮಿನಾಶಕ ಬಳಕೆ ಮಾಡದಿರುವುದೂ ಅಷ್ಟೇ ಮುಖ್ಯ.
ಕಿಮ್ಸ್ ಅಧ್ಯಯನದ ವರದಿಯನ್ನು ರಾಜ್ಯ ಆರೋಗ್ಯ ಸಚಿವರಿಗೆ ಸಲ್ಲಿಸಲು ಸಿದ್ಧತೆ ನಡೆಸಲಾಗಿದ್ದು, ಮುಂದಿನ ಹಂತದಲ್ಲಿ ಹೆಚ್ಚಿನ ರೈತರನ್ನು ಒಳಗೊಂಡು ಅಧ್ಯಯನ ನಡೆಸಲು ಉದ್ದೇಶಿಸಲಾಗಿದೆ.
ಬೆಳೆ ಉಳಿಸುವುದು ಎಷ್ಟು ಮುಖ್ಯವೋ… ಅನ್ನದಾತನ ಆರೋಗ್ಯ ಉಳಿಸುವುದೂ ಅಷ್ಟೇ ಮುಖ್ಯ. ಕ್ರಿಮಿನಾಶಕ ಬಳಕೆಯಲ್ಲಿ ಎಚ್ಚರಿಕೆ ಹಾಗೂ ಸುರಕ್ಷತಾ ಕ್ರಮ ಪಾಲನೆಯೇ ರೈತರ ಆರೋಗ್ಯ ರಕ್ಷಣೆಗೆ ಮೊದಲ ಹೆಜ್ಜೆಯಾಗಿದೆ.
ಕ್ಯಾಮೆರಾ ಪರ್ಸನ್ ಹೇಮಂತ್ ಜೊತೆ, ಸಂಗಮೇಶ ಸತ್ತಿಗೇರಿ, ಕರ್ನಾಟಕ ಟಿವಿ, ಹುಬ್ಬಳ್ಳಿ.
