Davanagere: ದಾವಣಗೆರೆ ನಗರದ RTO ಸರ್ಕಲ್ನಿಂದ ಅಕ್ತರ್ ರಝಾ ಸರ್ಕಲ್ವರೆಗೆ ಸ್ಮಾರ್ಟ್ ಸಿಟಿ ಯೋಜನೆಯಡಿ ನಿರ್ಮಿಸಲಾದ ರಸ್ತೆಯಲ್ಲಿ ನಿರಂತರವಾಗಿ ಅಪಘಾತಗಳು ಸಂಭವಿಸುತ್ತಿರುವ ಕುರಿತು ಸಾರ್ವಜನಿಕರು ಗಂಭೀರ ಆತಂಕ ವ್ಯಕ್ತಪಡಿಸುತ್ತಿದ್ದಾರೆ ಎಂದು ಎಸ್ಡಿಪಿಐ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಪರಾಜಿತ ಅಭ್ಯರ್ಥಿ ಅಪ್ಸರ್ ಕೊಡ್ಲಿಪೇಟೆ ತಿಳಿಸಿದ್ದಾರೆ.
ಈ ರಸ್ತೆಯ ನಿರ್ಮಾಣದ ಸಂದರ್ಭದಲ್ಲಿ ವೈಜ್ಞಾನಿಕ ಮತ್ತು ತಾಂತ್ರಿಕ ಸುರಕ್ಷತಾ ಮಾನದಂಡಗಳನ್ನು ಸಮರ್ಪಕವಾಗಿ ಪಾಲಿಸಲಾಗಿದೆಯೇ ಎಂಬ ಬಗ್ಗೆ ಸಾರ್ವಜನಿಕ ವಲಯದಲ್ಲಿ ಪ್ರಶ್ನೆಗಳು ಉದ್ಭವಿಸಿವೆ. ರಸ್ತೆಯ ಕೆಲವು ಭಾಗಗಳ ವಿನ್ಯಾಸ, ತಿರುವುಗಳು, ಎತ್ತರ-ತಗ್ಗು, ರಸ್ತೆ ಗುರುತುಗಳ ಕೊರತೆ, ಸಮರ್ಪಕ ಸೂಚನಾ ಫಲಕಗಳ ಅಭಾವ ಹಾಗೂ ಅಗತ್ಯ ಸುರಕ್ಷತಾ ಕ್ರಮಗಳ ಕೊರತೆಯಿಂದ ವಾಹನ ಸವಾರರು, ದ್ವಿಚಕ್ರ ವಾಹನ ಸವಾರರು ಮತ್ತು ಪಾದಚಾರಿಗಳು ಅಪಾಯ ಎದುರಿಸುವಂತಾಗಿದೆ.
ಈ ಹಿನ್ನೆಲೆಯಲ್ಲಿ, ರಸ್ತೆಯಲ್ಲಿರುವ ಅವೈಜ್ಞಾನಿಕ ವಿನ್ಯಾಸ ಹಾಗೂ ಸಾರ್ವಜನಿಕರಿಗೆ ಉಂಟಾಗುತ್ತಿರುವ ಅಪಾಯದ ಕುರಿತು ವಿಡಿಯೋ ಚಿತ್ರೀಕರಣ ಮಾಡಿ ತಮ್ಮ X ಖಾತೆಯಲ್ಲಿ ಪ್ರಕಟಿಸಿರುವ ಅಪ್ಸರ್ ಕೊಡ್ಲಿಪೇಟೆ, ಸಂಬಂಧಪಟ್ಟ ದಾವಣಗೆರೆ ಸ್ಮಾರ್ಟ್ ಸಿಟಿ ಅಧಿಕಾರಿಗಳು, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳನ್ನು (CEO) ಟ್ಯಾಗ್ ಮಾಡಿ ತುರ್ತು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಸಂಬಂಧಪಟ್ಟ ರಸ್ತೆಯಲ್ಲಿ ಸಂಭವಿಸುತ್ತಿರುವ ಅಪಘಾತಗಳ ದೃಶ್ಯಗಳು ಸಾರ್ವಜನಿಕರಲ್ಲಿ ಆತಂಕ ಮೂಡಿಸಿವೆ. ಸಾರ್ವಜನಿಕರ ಜೀವದೊಂದಿಗೆ ಚೆಲ್ಲಾಟ ಆಡಲು ಯಾವುದೇ ಅಭಿವೃದ್ಧಿ ಯೋಜನೆಗೂ ಅವಕಾಶ ಇರಬಾರದು. ಪ್ರತಿದಿನ ಈ ರಸ್ತೆಯಲ್ಲಿ ಸಂಚರಿಸುವ ಸಾವಿರಾರು ವಾಹನ ಸವಾರರು, ದ್ವಿಚಕ್ರ ವಾಹನ ಸವಾರರು ಹಾಗೂ ಪಾದಚಾರಿಗಳ ಸುರಕ್ಷತೆಯನ್ನು ಖಾತ್ರಿಪಡಿಸುವುದು ಸಂಬಂಧಪಟ್ಟ ಇಲಾಖೆಗಳು ಮತ್ತು ಅಧಿಕಾರಿಗಳ ಪ್ರಮುಖ ಆದ್ಯತೆಯಾಗಬೇಕು ಎಂದು ಅವರು ಹೇಳಿದ್ದಾರೆ.
ಈ ಹಿನ್ನೆಲೆಯಲ್ಲಿ ದಾವಣಗೆರೆ ಸ್ಮಾರ್ಟ್ ಸಿಟಿ ಯೋಜನೆಯ ಅಧಿಕಾರಿಗಳು, ದಾವಣಗೆರೆ ಮಹಾನಗರ ಪಾಲಿಕೆ, ಸಂಬಂಧಪಟ್ಟ ಇಂಜಿನಿಯರ್ಗಳು ಮತ್ತು ಇತರೆ ಅಧಿಕಾರಿಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಅಪ್ಸರ್ ಕೊಡ್ಲಿಪೇಟೆ ಆಗ್ರಹಿಸಿದ್ದಾರೆ.
ತಕ್ಷಣವೇ ಈ ಕೆಳಗಿನ ಕ್ರಮಗಳನ್ನು ಕೈಗೊಳ್ಳಬೇಕು:
1. ಸ್ಥಳಕ್ಕೆ ಭೇಟಿ ನೀಡಿ ಸಮಗ್ರ ತಾಂತ್ರಿಕ ಹಾಗೂ ಸುರಕ್ಷತಾ ಪರಿಶೀಲನೆ ನಡೆಸಬೇಕು.
2. ರಸ್ತೆಯ ವಿನ್ಯಾಸದಲ್ಲಿ ಅಥವಾ ನಿರ್ಮಾಣದಲ್ಲಿ ಯಾವುದೇ ತಾಂತ್ರಿಕ ದೋಷಗಳಿದ್ದರೆ ಅವುಗಳನ್ನು ತಕ್ಷಣ ಸರಿಪಡಿಸಬೇಕು.
3. ಅಗತ್ಯವಿರುವ ಕಡೆ ರಸ್ತೆ ಗುರುತುಗಳು, ಸೂಚನಾ ಫಲಕಗಳು, ಪ್ರತಿಫಲಕಗಳು, ವೇಗ ನಿಯಂತ್ರಣ ಕ್ರಮಗಳು ಹಾಗೂ ಇತರೆ ಅಗತ್ಯ ಸುರಕ್ಷತಾ ವ್ಯವಸ್ಥೆಗಳನ್ನು ಅಳವಡಿಸಬೇಕು.
4. ರಸ್ತೆ ಅಪಘಾತಗಳನ್ನು ತಡೆಗಟ್ಟಲು ತುರ್ತು ತಾತ್ಕಾಲಿಕ ಕ್ರಮಗಳ ಜೊತೆಗೆ ಶಾಶ್ವತ ಮತ್ತು ವೈಜ್ಞಾನಿಕ ಪರಿಹಾರವನ್ನು ಒದಗಿಸಬೇಕು.
5. ಈ ರಸ್ತೆ ನಿರ್ಮಾಣದ ಗುಣಮಟ್ಟ ಮತ್ತು ಸುರಕ್ಷತಾ ಮಾನದಂಡಗಳ ಕುರಿತು ಸಮಗ್ರ ಪರಿಶೀಲನೆ ನಡೆಸಿ, ಅಗತ್ಯವಿದ್ದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಜವಾಬ್ದಾರಿಯನ್ನು ನಿಗದಿಪಡಿಸಬೇಕು.
ಸಂಬಂಧಪಟ್ಟ ಅಧಿಕಾರಿಗಳು ತಮ್ಮ X ಖಾತೆಯಲ್ಲಿ ಟ್ಯಾಗ್ ಮಾಡಿರುವ ಮನವಿಯನ್ನು ಗಂಭೀರವಾಗಿ ಪರಿಗಣಿಸಿ, ಸಾರ್ವಜನಿಕರ ಸುರಕ್ಷತೆಯ ಹಿತದೃಷ್ಟಿಯಿಂದ ತುರ್ತು ಕ್ರಮ ಕೈಗೊಂಡು, ಕೈಗೊಂಡ ಕ್ರಮಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಬೇಕು ಎಂದು ಅಪ್ಸರ್ ಕೊಡ್ಲಿಪೇಟೆ ಆಗ್ರಹಿಸಿದ್ದಾರೆ.
“ಅಭಿವೃದ್ಧಿಯ ಹೆಸರಿನಲ್ಲಿ ಸಾರ್ವಜನಿಕರ ಜೀವಕ್ಕೆ ಅಪಾಯ ಉಂಟಾಗುವುದನ್ನು ಯಾವುದೇ ಕಾರಣಕ್ಕೂ ಒಪ್ಪಲಾಗದು. ಒಂದು ಜೀವ ಕಳೆದುಹೋದ ನಂತರ ಕ್ರಮ ಕೈಗೊಳ್ಳುವುದಕ್ಕಿಂತ, ಅಪಘಾತಗಳು ಸಂಭವಿಸುವ ಮುನ್ನವೇ ಅಧಿಕಾರಿಗಳು ವೈಜ್ಞಾನಿಕ ಮತ್ತು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬೇಕು. ಅವೈಜ್ಞಾನಿಕ ರಸ್ತೆ ವಿನ್ಯಾಸದಿಂದ ಉಂಟಾಗುತ್ತಿರುವ ಅಪಾಯವನ್ನು ತಕ್ಷಣ ಸರಿಪಡಿಸುವುದು ಸಂಬಂಧಪಟ್ಟ ಅಧಿಕಾರಿಗಳ ಕರ್ತವ್ಯವಾಗಿದೆ” ಎಂದು ಅವರು ತಿಳಿಸಿದ್ದಾರೆ.
