ಗೃಹಜ್ಯೋತಿ ಗ್ಯಾರಂಟಿ: ಉಚಿತ ವಿದ್ಯುತ್‌ಗಿಂತ ಫಲಾನುಭವಿಗಳಿಗೆ ಫಜೀತಿಯೇ ಹೆಚ್ಚು: ಆರ್.ಅಶೋಕ್

Political News: ಗೃಹಲಕ್ಷ್ಮೀ ಯೋಜನೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಮತ್ತೊಮ್ಮೆ ಪರಿಶೀಲನೆಗೆ ಮುಂದಾಗಿದ್ದು, ಈ ಬಗ್ಗೆ ವಿಪಕ್ಷ ನಾಯಕ ಆರ್.ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳ ಪೈಕಿ ಒಂದಾದ ಗೃಹಜ್ಯೋತಿ ಯೋಜನೆಯ ಮರುಪರಿಶೀಲನೆಯೇ ಸರ್ಕಾರದ ನಿರ್ಲಕ್ಷ್ಯಕ್ಕೆ ಸಿಲುಕಿದೆ. ರಾಜ್ಯದಲ್ಲಿ ಸುಮಾರು 1.64 ಕೋಟಿ ಫಲಾನುಭವಿಗಳಿರುವ ಯೋಜನೆಯ ಮರುಪರಿಶೀಲನೆ ಜುಲೈ 1ರಿಂದ ಆರಂಭವಾಗಿದ್ದರೂ, ಪ್ರಕ್ರಿಯೆ ಮಂದಗತಿಯಲ್ಲಿ ಸಾಗುತ್ತಿದೆ. ಮೊಬೈಲ್ ಆ್ಯಪ್‌ನ ತಾಂತ್ರಿಕ ದೋಷ, ಸರ್ವರ್ ಸಮಸ್ಯೆ, ಸಿಬ್ಬಂದಿ ಕೊರತೆ ಹಾಗೂ ದಾಖಲೆಗಳ ಗೊಂದಲದಿಂದಾಗಿ ಜನರು ಬೆಸ್ಕಾಂ ಕಚೇರಿಗಳ ಮುಂದೆ ಸರತಿ ನಿಲ್ಲುವಂತಾಗಿದೆ ಎಂದು ಅಶೋಕ್ ಕಿಡಿಕಾರಿದ್ದಾರೆ.

ಜುಲೈ ಅಂತ್ಯದ ವೇಳೆಗೆ 1.65 ಕೋಟಿ ನೋಂದಾಯಿತ ಫಲಾನುಭವಿಗಳ ಪೈಕಿ ಕೇವಲ 64.18 ಲಕ್ಷ ಕುಟುಂಬಗಳ ಪರಿಶೀಲನೆ ಪೂರ್ಣಗೊಂಡಿರುವುದು ಸರ್ಕಾರದ ವೈಫಲ್ಯಕ್ಕೆ ಹಿಡಿದ ಕೈಗನ್ನಡಿ. ಮನೆ ಮಾಲೀಕರು–ಬಾಡಿಗೆದಾರರ ಗೊಂದಲ, ಮನೆ ಬದಲಿಸಿದವರ ಸಂಪರ್ಕದ ಸಮಸ್ಯೆ, ಆಧಾರ್ ದಾಖಲೆಗಳ ವಿಚಾರ, ಹೊಸ ಸಂಪರ್ಕಗಳಿಗೆ ಯೂನಿಟ್ ಲೆಕ್ಕಾಚಾರ ಸೇರಿದಂತೆ ಹತ್ತಾರು ಸಮಸ್ಯೆಗಳಿಗೆ ಜನರು ಉತ್ತರ ಹುಡುಕುವಂತಾಗಿದೆ.

ಜನರಿಗೆ ಉಚಿತ ವಿದ್ಯುತ್ ನೀಡುವುದಾಗಿ ಹೇಳಿ, ಈಗ ಉಚಿತವಾಗಿ ನೀಡಬೇಕಾದ ಪರಿಹಾರಕ್ಕೆ ಬದಲಾಗಿ ಕಚೇರಿಯಿಂದ ಕಚೇರಿಗೆ ಅಲೆದಾಡುವ ಶಿಕ್ಷೆ ನೀಡುತ್ತಿರುವುದೇ ಕಾಂಗ್ರೆಸ್ ಸರ್ಕಾರದ ‘ಗ್ಯಾರಂಟಿ’ಯೇ..?? ಗ್ಯಾರಂಟಿ ಯೋಜನೆಗಳನ್ನು ಘೋಷಿಸುವುದಷ್ಟೇ ಸರ್ಕಾರದ ಕೆಲಸವಲ್ಲ. ಅವುಗಳನ್ನು ಪಾರದರ್ಶಕವಾಗಿ, ಸರಳವಾಗಿ ಮತ್ತು ಫಲಾನುಭವಿಗಳಿಗೆ ತೊಂದರೆಯಾಗದಂತೆ ಅನುಷ್ಠಾನಗೊಳಿಸುವ ಜವಾಬ್ದಾರಿಯೂ ಸರ್ಕಾರದ್ದೇ ಎಂದು ಆರ್.ಅಶೋಕ್ ಹೇಳಿದ್ದಾರೆ.

ಗೃಹಜ್ಯೋತಿ ಯೋಜನೆಯಲ್ಲಿನ ಗೊಂದಲಗಳನ್ನು ತಕ್ಷಣ ಸರಿಪಡಿಸಿ, ಜನರ ಅಲೆದಾಟಕ್ಕೆ ಕಡಿವಾಣ ಹಾಕಲಿ ಕಾಂಗ್ರೆಸ್ ಸರ್ಕಾರ. ಸುಮ್ಮನೆ ಗ್ಯಾರೆಂಟಿ ಯೋಜನೆ ಹೆಸರಿನಲ್ಲಿ ಪ್ರಚಾರ ಪಡೆಯಲು ಹಾಗೂ ನಿಮ್ಮ ಕಾರ್ಯಕರ್ತರಿಗೆ ‘ಗ್ಯಾರಂಟಿ ಅನುಷ್ಠಾನ ಸಮಿತಿ”ಯ ಎನ್ನುವ ಹೆಸರಲ್ಲಿ “ಕಾಂಗ್ರೆಸ್ ಅತೃಪ್ತರ ಜೇಬು ತುಂಬಿಸುವ ಗಂಜಿ ಕೇಂದ್ರಕ್ಕೆ” ಸೀಮಿತ ಆಗದೇ ಇರಲಿ ಎಂದು ಆರ್.ಅಶೋಕ್ ಹೇಳಿಕೆ ನೀಡಿದ್ದಾರೆ.

About The Author