ಹಿಜಾಬ್‌ಗೆ ಕೋರ್ಟ್ ಬ್ರೇಕ್ – ಅರ್ಜಿದಾರರಿಗೆ ಬಿಗ್ ಶಾಕ್!

ಶಾಲಾ ಸಮವಸ್ತ್ರದೊಂದಿಗೆ ಹಿಜಾಬ್ ಅಥವಾ ತಲೆಗೆ ಸ್ಕಾರ್ಫ್ ಧರಿಸಲು ಅನುಮತಿ ನೀಡಬೇಕು ಎಂದು ಕೋರಿ ಮುಸ್ಲಿಂ ವಿದ್ಯಾರ್ಥಿನಿಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ವಜಾಗೊಳಿಸಿದೆ. ತರಗತಿಯಲ್ಲಿ ಹಿಜಾಬ್ ಧರಿಸುವುದು ಇಸ್ಲಾಂ ಧರ್ಮದಲ್ಲಿ ಕಡ್ಡಾಯ ಧಾರ್ಮಿಕ ಆಚರಣೆ ಎಂಬುದನ್ನು ಸಾಬೀತುಪಡಿಸುವಲ್ಲಿ ಅರ್ಜಿದಾರರು ವಿಫಲರಾಗಿದ್ದಾರೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಆಗಸ್ಟ್ 21ರಂದು ನ್ಯಾಯಮೂರ್ತಿ ಜೆ.ಜೆ. ಮುನೀರ್ ಮತ್ತು ನ್ಯಾಯಮೂರ್ತಿ ಇಂದರ್‌ಜೀತ್ ಶುಕ್ಲಾ ಅವರನ್ನೊಳಗೊಂಡ ಪೀಠ ಈ ಮಹತ್ವದ ತೀರ್ಪು ನೀಡಿದೆ. ಮಹಿಳೆಯರು ತಲೆಗೆ ಸ್ಕಾರ್ಫ್ ಧರಿಸುವುದು ಇಸ್ಲಾಂ ಧರ್ಮದಲ್ಲಿ ಅತ್ಯಗತ್ಯ ಧಾರ್ಮಿಕ ಆಚರಣೆಯಲ್ಲ ಎಂದು ಈ ಹಿಂದೆ ಹಲವು ಹೈಕೋರ್ಟ್‌ಗಳು ಅಭಿಪ್ರಾಯಪಟ್ಟಿರುವುದನ್ನು ಪೀಠ ಉಲ್ಲೇಖಿಸಿದೆ. ಅಲ್ಲದೆ, ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಮೇಲಿನ ನಿರ್ಬಂಧವನ್ನು ಸಮರ್ಥಿಸಿ ಕರ್ನಾಟಕ ಹೈಕೋರ್ಟ್ ನೀಡಿರುವ ತೀರ್ಪು ಈಗಲೂ ಅತ್ಯಂತ ಮಹತ್ವದ್ದಾಗಿದೆ ಮತ್ತು ತಮಗೆ ಮಾರ್ಗದರ್ಶಕವಾಗಿದೆ ಎಂದು ಹೈಕೋರ್ಟ್ ತಿಳಿಸಿದೆ.

ಪ್ರಯಾಗ್‌ರಾಜ್‌ನ ಟಾಗೋರ್ ಪಬ್ಲಿಕ್ ಸ್ಕೂಲ್‌ನ 11ನೇ ತರಗತಿಯ ವಿದ್ಯಾರ್ಥಿನಿಯೊಬ್ಬರು ಈ ಅರ್ಜಿ ಸಲ್ಲಿಸಿದ್ದರು. ಹಿಜಾಬ್ ಧರಿಸುವುದು ಸಂವಿಧಾನದ ಆರ್ಟಿಕಲ್ 25ರ ಅಡಿಯಲ್ಲಿ ರಕ್ಷಣೆ ಪಡೆಯುವ ಅತ್ಯಗತ್ಯ ಧಾರ್ಮಿಕ ಆಚರಣೆ ಎಂಬ ವಾದವನ್ನು ನ್ಯಾಯಾಲಯ ಒಪ್ಪಲಿಲ್ಲ. ಅಗತ್ಯ ಧಾರ್ಮಿಕ ದಾಖಲೆಗಳನ್ನು ಅರ್ಜಿದಾರರು ಸಲ್ಲಿಸಿಲ್ಲ ಎಂದು ಕೋರ್ಟ್ ತಿಳಿಸಿದೆ. ಶಾಲೆಯ ಸಮವಸ್ತ್ರದ ನಿಯಮಗಳನ್ನು ಎಲ್ಲರಿಗೂ ಸಮಾನವಾಗಿ ಜಾರಿಗೊಳಿಸಿ ಶಿಸ್ತು ಕಾಪಾಡುವ ಅಧಿಕಾರ ಶಾಲಾ ಆಡಳಿತ ಮಂಡಳಿಗೇ ಸೇರಿದೆ ಎಂದೂ ನ್ಯಾಯಾಲಯ ಸ್ಪಷ್ಟಪಡಿಸಿದೆ.

ಹಿಂದೆ ಆಕ್ಷೇಪ ವ್ಯಕ್ತಪಡಿಸದ ಕಾರಣಕ್ಕೆ ಶಾಲೆಯ ಡ್ರೆಸ್ ಕೋಡ್ ನಿಯಮಗಳನ್ನು ಸಡಿಲಿಸಬೇಕು ಎಂದು ಕೋರುವ ಹಕ್ಕು ವಿದ್ಯಾರ್ಥಿನಿಗೆ ಇಲ್ಲ ಎಂದು ತಿಳಿಸಿದ ನ್ಯಾಯಾಲಯ, ಅಂತಿಮವಾಗಿ ಅರ್ಜಿಯನ್ನು ವಜಾಗೊಳಿಸಿದೆ. ದೇಶಾದ್ಯಂತ ಭಾರೀ ಸಂಚಲನ ಮೂಡಿಸಿರುವ ಈ ತೀರ್ಪಿನ ಕುರಿತು ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮಾಡಿ ತಿಳಿಸಿ.

About The Author