ಪಾರ್ಕಿಂಗ್ ಶುಲ್ಕಕ್ಕೆ ವಿರೋಧ – ಸಿಎಂ’ಗೆ ಸಚಿವ ಬರೆದ ಪತ್ರದಲ್ಲೇನಿದೆ?

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮನೆ ಮುಂದೆ ರಸ್ತೆಬದಿಯಲ್ಲಿ ವಾಹನ ನಿಲ್ಲಿಸಿದರೆ ಪಾರ್ಕಿಂಗ್ ಶುಲ್ಕ ವಿಧಿಸುವ ಸರ್ಕಾರದ ಪ್ರಸ್ತಾವನೆಗೆ ಸಚಿವ ರಾಮಲಿಂಗಾರೆಡ್ಡಿ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಕುರಿತು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವ ಅವರು, ಈ ಪ್ರಸ್ತಾವನೆಯನ್ನು ಕೂಡಲೇ ಮರುಪರಿಶೀಲಿಸುವಂತೆ ಮನವಿ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಮನೆ ಮುಂದೆ ವಾಹನ ನಿಲ್ಲಿಸುವುದಕ್ಕೆ ವರ್ಷಕ್ಕೆ 15 ಸಾವಿರದಿಂದ 25 ಸಾವಿರ ರೂಪಾಯಿವರೆಗೆ ಪಾರ್ಕಿಂಗ್ ಶುಲ್ಕ ವಿಧಿಸುವ ಪ್ರಸ್ತಾವನೆ ಕೇಳಿಬಂದಿತ್ತು. ಆದರೆ ಇದು ಮಧ್ಯಮ ವರ್ಗದ ಹಾಗೂ ಸಾಮಾನ್ಯ ಕುಟುಂಬಗಳ ಮೇಲೆ ತೀವ್ರ ಆರ್ಥಿಕ ಹೊರೆಯಾಗಲಿದೆ ಎಂದು ರಾಮಲಿಂಗಾರೆಡ್ಡಿ ತಮ್ಮ ಪತ್ರದಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ.

ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆ, ಇಂಧನ ಹಾಗೂ ಜಿಎಸ್‌ಟಿಯಿಂದ ಸಂಕಷ್ಟದಲ್ಲಿರುವ ಜನಸಾಮಾನ್ಯರಿಗೆ ಈ ಶುಲ್ಕದ ಬರೆ ಮತ್ತಷ್ಟು ಗಾಯದ ಮೇಲೆ ಬರೆ ಎಳೆದಂತಾಗುತ್ತದೆ. ದೊಡ್ಡ ನಿವೇಶನ ಅಥವಾ ಸ್ವಂತ ಮನೆ ಹೊಂದಿರುವವರಿಗೆ ತಮ್ಮ ಆವರಣದಲ್ಲೇ ವಾಹನ ನಿಲ್ಲಿಸಲು ಜಾಗವಿರಬಹುದು. ಆದರೆ ಬಹುತೇಕ ಮಧ್ಯಮ ವರ್ಗದವರು ಮತ್ತು ಸಣ್ಣ ಅಪಾರ್ಟ್‌ಮೆಂಟ್‌ಗಳಲ್ಲಿ ವಾಸಿಸುವವರಿಗೆ ವಾಹನ ನಿಲ್ಲಿಸಲು ಸ್ಥಳಾವಕಾಶವಿರುವುದಿಲ್ಲ.

ಹಳೆಯ ವಸತಿ ಪ್ರದೇಶಗಳಲ್ಲಿ ಪಾರ್ಕಿಂಗ್ ಸೌಲಭ್ಯ ಕಲ್ಪಿಸುವುದು ಕಷ್ಟಕರವಾಗಿದ್ದು, ಈಗಾಗಲೇ ಸಾಲ, ಶಿಕ್ಷಣ ಹಾಗೂ ಆರೋಗ್ಯದ ಖರ್ಚುಗಳಿಂದ ಕಂಗೆಟ್ಟಿರುವ ಜನರಿಗೆ ಈ ನಿಯಮ ಕಷ್ಟ ತರಲಿದೆ ಎಂದು ಸಚಿವರು ಸಿಎಂ ಗಮನ ಸೆಳೆದಿದ್ದಾರೆ. ಅಕ್ರಮ ಹಾಗೂ ದೀರ್ಘಾವಧಿಯ ರಸ್ತೆ ಬದಿ ಪಾರ್ಕಿಂಗ್ ಅನ್ನು ನಿಯಂತ್ರಿಸಬೇಕೆಂಬುದನ್ನು ಒಪ್ಪಿಕೊಳ್ಳುವಂತೆ ತಿಳಿಸಿರುವ ಅವರು, ಮನೆ ಆವರಣದಲ್ಲಿ ವಾಹನ ನಿಲ್ಲಿಸಲು ಜಾಗವಿಲ್ಲದ ಸಾಮಾನ್ಯ ಕುಟುಂಬಗಳಿಗೆ ವಿನಾಯಿತಿ ನೀಡಬೇಕು ಹಾಗೂ ಈ ಬಗ್ಗೆ ಶಾಸಕರು ಮತ್ತು ಸಾರ್ವಜನಿಕರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

About The Author