Haveri News: ಹಾವೇರಿ ಜಿಲ್ಲಾಸ್ಪತ್ರೆಗೆ ಉಪಲೋಕಾಯುಕ್ತ ಬಿ. ವೀರಪ್ಪ ಅವರು ಇಂದು ದಿಢೀರ್ ಭೇಟಿ ನೀಡಿ ಕಟ್ಟುನಿಟ್ಟಿನ ಪರಿಶೀಲನೆ ನಡೆಸಿದರು. ಆಸ್ಪತ್ರೆಯ ವಿವಿಧ ವಾರ್ಡ್‌ಗಳು ಹಾಗೂ ಔಷಧೀಯ ವಿಭಾಗಗಳಿಗೆ ಖುದ್ದಾಗಿ ತೆರಳಿದ ಲೋಕಾಯುಕ್ತರ ತಂಡ, ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ಬಳಿ ತೆರಳಿ ಆಸ್ಪತ್ರೆಯಲ್ಲಿ ಸಿಗುತ್ತಿರುವ ಸೌಲಭ್ಯಗಳ ಕುರಿತು ಮಾಹಿತಿ ಪಡೆಯಿತು. ಈ ವೇಳೆ ಲೋಕಾಯುಕ್ತರನ್ನು ಕಂಡ ರೋಗಿಗಳು ತಮ್ಮ ಅಳಲನ್ನು ತೋಡಿಕೊಂಡಿದ್ದು, “ಸ್ವಾಮಿ, ನೀವು ಇವತ್ತು ಆಸ್ಪತ್ರೆಗೆ ಭೇಟಿ ನೀಡುತ್ತಿದ್ದೀರಿ ಎಂಬ ವಿಷಯ ತಿಳಿದು ವೈದ್ಯರು ಹಾಗೂ ಸಿಬ್ಬಂದಿ ಇವತ್ತು ಇಡೀ ಆಸ್ಪತ್ರೆಯನ್ನು ಕ್ಲೀನ್ ಮಾಡಿದ್ದಾರೆ, ಪ್ರತಿದಿನ මෙಂತಹ ಸ್ವಚ್ಛತೆ ಇರುವುದಿಲ್ಲ” ಎಂದು ಲೋಕಾಯುಕ್ತರ ಎದುರೇ ಜಿಲ್ಲಾಸ್ಪತ್ರೆಯ ನೈಜ ಸ್ಥಿತಿಯನ್ನು ಬಿಚ್ಚಿಟ್ಟರು.
ಆಸ್ಪತ್ರೆಯ ಆವರಣದಲ್ಲಿದ್ದ ಕುಡಿಯುವ ನೀರಿನ ಘಟಕವು ತೀವ್ರ ಅಸ್ವಚ್ಛತೆಯಿಂದ ಕೂಡಿರುವುದನ್ನು ಗಮನಿಸಿದ ಉಪಲೋಕಾಯುಕ್ತ ಬಿ.ವೀರಪ್ಪ ಅವರು ಕರ್ತವ್ಯಲೋಪ ಎಸಗಿದ ವೈದ್ಯರು ಹಾಗೂ ಆಸ್ಪತ್ರೆಯ ಅಧಿಕಾರಿಗಳನ್ನು ಸ್ಥಳದಲ್ಲೇ ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಸಾರ್ವಜನಿಕ ಆರೋಗ್ಯದ ವಿಷಯದಲ್ಲಿ ಯಾವುದೇ ನಿರ್ಲಕ್ಷ್ಯ ವಹಿಸಬಾರದು ಎಂದು ಖಡಕ್ ಎಚ್ಚರಿಕೆ ನೀಡಿದರು. ಇದೇ ವೇಳೆ ಸಾರ್ವಜನಿಕರು ಸಹ ಆಸ್ಪತ್ರೆಯ ದುರಂತ ಸ್ಥಿತಿ ಮತ್ತು ಸವಣೂರಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಊಟ ನೀಡದಿರುವ ಬಗ್ಗೆ ದೂರುಗಳ ಸುರಿಮಳೆಯನ್ನೇ ಹರಿಸಿದರು.
ಇನ್ನು ಸ್ಥಳಕ್ಕೆ ಆಗಮಿಸಿದ ಅಲ್ಲಿಪುರ ಗ್ರಾಮದ ಕೆಲ ನಿವಾಸಿಗಳು ತಮ್ಮ ಊರಿನಲ್ಲಿ ಸ್ವಚ್ಛತೆಯೇ ಇಲ್ಲ ಎಂದು ವಿಡಿಯೋ ತೋರಿಸಿ ಲೋಕಾಯುಕ್ತರನ್ನು ಊರಿಗೆ ಬರುವಂತೆ ಮನವಿ ಮಾಡಿದರು. ಇದಕ್ಕೆ ತಕ್ಷಣವೇ ಸ್ಪಂದಿಸಿದ ಉಪಲೋಕಾಯುಕ್ತ ಬಿ.ವೀರಪ್ಪ ಅವರು, “ನೀವೇ ವೋಟ್ ಹಾಕಿ ಗ್ರಾಮ ಪಂಚಾಯತಿ ಸದಸ್ಯರನ್ನು ಗೆಲ್ಲಿಸಿದ್ದೀರಿ. ಅವರನ್ನೇ ಗಟ್ಟಿಯಾಗಿ ಹಿಡಿದು, ಸರಿಯಾಗಿ ಒದ್ದು ಕೆಲಸ ತಗೋಬೇಕು” ಎಂದು ಗ್ರಾಮೀಣ ಶೈಲಿಯಲ್ಲಿಯೇ ಖಡಕ್ ಸಲಹೆ ನೀಡಿದರು. ಈ ದಿಢೀರ್ ಭೇಟಿಯು ಹಾವೇರಿ ಜಿಲ್ಲಾಡಳಿತ ಹಾಗೂ ಆಸ್ಪತ್ರೆ ಸಿಬ್ಬಂದಿಯಲ್ಲಿ ಭಾರಿ ಸಂಚಲನ ಮೂಡಿಸಿದೆ.
