ಎಸ್‌ಸಿ ಒಳಮೀಸಲಾತಿ ವಿರುದ್ಧ ಹೋರಾಟ ಮುಂದುವರಿಕೆ – ಸಂವಿಧಾನ ತಿದ್ದುಪಡಿಗೆ ಆಗ್ರಹ

ಬೆಂಗಳೂರು, ಆ.27: ಪರಿಶಿಷ್ಟ ಜಾತಿಗಳ (ಎಸ್‌ಸಿ) ಒಳಮೀಸಲಾತಿ ಅಥವಾ ಒಳವರ್ಗೀಕರಣವು ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ಹೆಸರಿನಲ್ಲಿ ದಲಿತ ಸಮುದಾಯಗಳ ಏಕತೆಗೆ ಧಕ್ಕೆ ತರುವ ಕ್ರಮವಾಗಿದೆ ಎಂದು ದಲಿತ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಒಳಮೀಸಲಾತಿಯನ್ನು ವಿರೋಧಿಸಿ ಮಾತನಾಡಿದ ಡಾ. ರತ್ನಾಕರ್ ಅವರು, ಪರಿಶಿಷ್ಟ ಜಾತಿಗಳ ಸಮುದಾಯಗಳ ನಡುವೆ ಸಂಘರ್ಷ ಉಂಟುಮಾಡುವ ಬದಲು ಎಲ್ಲ ಸಮುದಾಯಗಳ ಏಕತೆ ಹಾಗೂ ರಾಜಕೀಯ ಶಕ್ತಿಯನ್ನು ಬಲಪಡಿಸುವ ಅಗತ್ಯವಿದೆ ಎಂದು ಹೇಳಿದರು.

ಕರ್ನಾಟಕದಲ್ಲಿ ಒಟ್ಟು 59 ಪರಿಶಿಷ್ಟ ಜಾತಿಗಳಿದ್ದು, ಒಳಮೀಸಲಾತಿ ಜಾರಿಯಿಂದ ಕೆಲವೇ ಸಮುದಾಯಗಳಿಗೆ ಹೆಚ್ಚಿನ ಅವಕಾಶ ಸೀಮಿತವಾಗುವ ಸಾಧ್ಯತೆಯಿದೆ. ಕರ್ನಾಟಕದಲ್ಲಿ 107 ಪರಿಶಿಷ್ಟ ಜಾತಿಗಳು ಹಾಗೂ ದೇಶಾದ್ಯಂತ 1,108 ಪರಿಶಿಷ್ಟ ಜಾತಿಗಳಿರುವ ಸಂದರ್ಭದಲ್ಲಿ ಎಲ್ಲ ಸಮುದಾಯಗಳಿಗೂ ಸಮಾನವಾಗಿ ನ್ಯಾಯ ಒದಗಿಸುವುದು ಹೇಗೆ ಸಾಧ್ಯ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕು ಎಂದು ಪ್ರಶ್ನಿಸಿದರು.

ಪರಿಶಿಷ್ಟ ಜಾತಿಗಳ ಎಲ್ಲ ಸಮುದಾಯಗಳಿಗೆ ಹೆಚ್ಚಿನ ಅವಕಾಶ ಕಲ್ಪಿಸುವುದು ಸರ್ಕಾರದ ಉದ್ದೇಶವಾಗಿದ್ದರೆ, ಒಟ್ಟಾರೆ ಮೀಸಲಾತಿಯ ಪ್ರಮಾಣವನ್ನು ಹೆಚ್ಚಿಸುವ ಕುರಿತು ಚಿಂತನೆ ನಡೆಸಬಹುದು. ಆದರೆ, ಮೀಸಲಾತಿ ಹಂಚಿಕೆ ವಿಚಾರದಲ್ಲಿ ಸಮುದಾಯಗಳ ನಡುವೆ ಭಿನ್ನಾಭಿಪ್ರಾಯ ಮತ್ತು ಸಂಘರ್ಷ ಸೃಷ್ಟಿಸುವ ಕ್ರಮವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದರು.

ಒಳಮೀಸಲಾತಿಗೆ ಸಂಬಂಧಿಸಿದಂತೆ ಜಾರಿಗೊಳಿಸಿರುವ ಕಾನೂನುಗಳು ಶಾಶ್ವತವಲ್ಲ. ಜನರು ಪ್ರಜಾಪ್ರಭುತ್ವದ ಮಾರ್ಗದಲ್ಲಿ ಶಾಂತಿಯುತವಾಗಿ ಹೋರಾಟ ನಡೆಸಿದರೆ ತಮ್ಮ ನ್ಯಾಯಯುತ ಬೇಡಿಕೆಗಳು ಈಡೇರುವ ಸಾಧ್ಯತೆಯಿದೆ. ರೈತರ ಹೋರಾಟದ ಸಂದರ್ಭದಲ್ಲಿ ಕೃಷಿ ಕಾಯ್ದೆಗಳನ್ನು ಹಿಂಪಡೆದಿರುವುದನ್ನು ಅವರು ಉದಾಹರಣೆಯಾಗಿ ಉಲ್ಲೇಖಿಸಿದರು.

ಪರಿಶಿಷ್ಟ ಜಾತಿಗಳ ಒಳವರ್ಗೀಕರಣಕ್ಕೆ ಅವಕಾಶವಿಲ್ಲದಂತೆ ಸಂಸತ್ತಿನಲ್ಲಿ ಸಂವಿಧಾನ ತಿದ್ದುಪಡಿ ಮಾಡಬೇಕು ಎಂದು ಅವರು ಆಗ್ರಹಿಸಿದರು. ಈ ಬೇಡಿಕೆ ಈಡೇರುವವರೆಗೆ ಹೋರಾಟ ನಿಲ್ಲುವುದಿಲ್ಲ ಎಂದು ಡಾ. ರತ್ನಾಕರ್ ಸ್ಪಷ್ಟಪಡಿಸಿದರು.

ದಲಿತ ಸಮುದಾಯಗಳ ಏಕತೆ, ಹಕ್ಕುಗಳು ಮತ್ತು ಸಾಮಾಜಿಕ ನ್ಯಾಯವನ್ನು ರಕ್ಷಿಸುವ ನಿಟ್ಟಿನಲ್ಲಿ ಎಲ್ಲರೂ ಶಾಂತಿಯುತ ಹಾಗೂ ನಿರಂತರ ಪ್ರಜಾಸತ್ತಾತ್ಮಕ ಹೋರಾಟಕ್ಕೆ ಸಜ್ಜಾಗಬೇಕು ಎಂದು ಅವರು ಕರೆ ನೀಡಿದರು.

ಈ ಸಂದರ್ಭದಲ್ಲಿ ಗೋವಿಂದಪ್ಪ, ಅರವಿಂದ್ ಎಚ್.ಎನ್., ಜೆ. ಕೇಶವ ಪ್ರಸಾದ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

About The Author