ರಾಜ್ಯ ರಾಜಕಾರಣದಲ್ಲಿ ಮತ್ತೊಮ್ಮೆ ಬಿರುಗಾಳಿ ಎಬ್ಬಿಸಿರುವ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು, ರಾಜ್ಯದ ಹಾಲಿ ಮುಖ್ಯಮಂತ್ರಿಯೇ ಬೇನಾಮಿ ಕಂಪನಿಗಳ ಮೂಲಕ ನೈಸ್ ಕಂಪನಿಯನ್ನು ಖರೀದಿಸಲು ಹೊರಟಿದ್ದಾರೆ ಎಂದು ಅತ್ಯಂತ ಗಂಭೀರ ಆರೋಪ ಮಾಡಿದ್ದಾರೆ.
ಜೆಡಿಎಸ್ ರಾಜ್ಯ ಕಚೇರಿಯಲ್ಲಿ ಮಾತನಾಡಿದ ಎಚ್.ಡಿ. ಕುಮಾರಸ್ವಾಮಿ, ಬಿಎಂಐಸಿ ಯೋಜನೆ ಹೆಸರಿನಲ್ಲಿ ಸಾವಿರಾರು ಎಕರೆ ಭೂಮಿಯನ್ನು ಲೂಟಿ ಮಾಡಲು ಸಂಚು ರೂಪಿಸಲಾಗಿದೆ ಎಂದು ಗುಡುಗಿದ್ದಾರೆ. ನೈಸ್ ಅಕ್ರಮಗಳಲ್ಲಿ ರಾಜ್ಯದ ಮುಖ್ಯಮಂತ್ರಿಗಳು ನೇರವಾಗಿ ಶಾಮೀಲಾಗಿದ್ದಾರೆ ಎಂದು ಆರೋಪಿಸಿರುವ ಅವರು, ನೈಸ್ ಕಂಪನಿಯನ್ನು ಅನ್ಯರ ಹೆಸರಿನಲ್ಲಿ ಯಾರು ಟೇಕ್ ಓವರ್ ಮಾಡುತ್ತಿದ್ದಾರೆ ಎಂಬುದನ್ನು ತಾಕತ್ತಿದ್ದರೆ ಮುಖ್ಯಮಂತ್ರಿಗಳು ಜನತೆಯ ಮುಂದೆ ಬಹಿರಂಗಪಡಿಸಲಿ ಎಂದು ಬಹಿರಂಗ ಸವಾಲು ಹಾಕಿದ್ದಾರೆ.
ಬೇನಾಮಿ ಕಂಪನಿಗಳ ಮೂಲಕ ಯಾರೆಲ್ಲಾ ಈ ವ್ಯವಹಾರಕ್ಕೆ ಇಳಿದಿದ್ದಾರೆ ಎಂಬ ಸಂಪೂರ್ಣ ಮಾಹಿತಿ ತಮ್ಮ ಬಳಿ ಇದೆ ಎಂದಿರುವ ಕುಮಾರಸ್ವಾಮಿ, ಮುಂದಿನ ವಾರ ಎಲ್ಲಾ ದಾಖಲೆಗಳನ್ನು ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ. ಈ ಮುಖ್ಯಮಂತ್ರಿಗೂ ನೈಸ್ ಯೋಜನೆಗೂ ಇರುವ ಸಂಬಂಧವೇನು? ಹಾಗೂ ಈ ಕಂಪನಿಯ ಮಾಲೀಕರ ಜೊತೆ ಇರುವ ವ್ಯವಹಾರಗಳು ಏನು ಎಂಬುದರ ಕುರಿತು ಧೈರ್ಯವಿದ್ದರೆ ಮಾತನಾಡಲಿ ಎಂದು ಅವರು ಆಗ್ರಹಿಸಿದ್ದಾರೆ.
ತಮ್ಮ ವಿರುದ್ಧ ಮಾಡುತ್ತಿರುವ ಬೇನಾಮಿ ಆಸ್ತಿ ಆರೋಪಗಳನ್ನು ತಳ್ಳಿಹಾಕಿರುವ ಅವರು, ಅಂತಹ ಒಂದು ಬೇನಾಮಿ ಆಸ್ತಿ ಇದ್ದರೂ ತಾನು ರಾಜಕೀಯವಾಗಿ ನಿವೃತ್ತಿಯಾಗುವುದಾಗಿ ಸವಾಲು ಹಾಕಿದ್ದಾರೆ. ನೈಸ್ ಕಂಪನಿ ವಿವಾದವು ಈಗ ರಾಜ್ಯ ರಾಜಕಾರಣದಲ್ಲಿ ಮತ್ತಷ್ಟು ತೀವ್ರ ಸ್ವರೂಪ ಪಡೆದುಕೊಂಡಿದ್ದು, ಮುಂದಿನ ದಿನಗಳಲ್ಲಿ ಹೊರಬರಲಿರುವ ದಾಖಲೆಗಳು ಯಾವೆಲ್ಲಾ ರಾಜಕೀಯ ನಾಯಕರಿಗೆ ಮುಳುವಾಗಲಿವೆ ಎಂಬುದನ್ನು ಕಾದು ನೋಡಬೇಕಿದೆ.
