Hubli News: ಹುಬ್ಬಳ್ಳಿಯ ಹಳೇ ಹುಬ್ಬಳ್ಳಿಯ ಭವಾನಿ ಶಂಕರ್ ದೇವಸ್ಥಾನದ ವಿವಾದಿತ ಪುಷ್ಕರಣಿ ವಿಚಾರ ಇದೀಗ ಮತ್ತಷ್ಟು ತೀವ್ರಗೊಂಡಿದೆ. ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಜಗದೀಶ್ ಶೆಟ್ಟರ್ ದೇವಸ್ಥಾನಕ್ಕೆ ಭೇಟಿ ನೀಡಿ, ವಿವಾದಿತ ಪುಷ್ಕರಣಿ ಸ್ಥಳ ಹಾಗೂ ರಸ್ತೆಯನ್ನು ಪರಿಶೀಲಿಸಿದ್ದಾರೆ. ಇದೇ ವೇಳೆ ಪುಷ್ಕರಣಿಗೆ ಸಂಬಂಧಿಸಿದ ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಶೆಟ್ಟರ್, ಪುಷ್ಕರಣಿ ಉಳಿಸುವ ಹೋರಾಟದಲ್ಲಿ ಯಾವುದೇ ರಾಜಕೀಯ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಭವಾನಿ ಶಂಕರ್ ದೇವಸ್ಥಾನ… ಹಳೇ ಹುಬ್ಬಳ್ಳಿಯ ಐತಿಹಾಸಿಕ ಹಿನ್ನೆಲೆಯುಳ್ಳ ಈ ದೇವಸ್ಥಾನದ ಪುಷ್ಕರಣಿ ವಿಚಾರ ಇದೀಗ ವಿವಾದದ ಕೇಂದ್ರಬಿಂದುವಾಗಿದೆ.
ವಿವಾದಿತ ಪುಷ್ಕರಣಿ ಸ್ಥಳಕ್ಕೆ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಜಗದೀಶ್ ಶೆಟ್ಟರ್ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು. ದೇವಸ್ಥಾನದ ಸುತ್ತಮುತ್ತಲಿನ ಪ್ರದೇಶ ಹಾಗೂ ಪುಷ್ಕರಣಿ ಜಾಗದಲ್ಲಿ ನಿರ್ಮಿಸಲಾಗಿರುವ ರಸ್ತೆಯನ್ನೂ ಪರಿಶೀಲಿಸಿದರು.
ಇದೇ ವೇಳೆ ಪುಷ್ಕರಣಿಗೆ ಸಂಬಂಧಿಸಿದ ದಾಖಲೆಗಳನ್ನು ಮಾಧ್ಯಮಗಳ ಮುಂದೆ ಬಿಡುಗಡೆ ಮಾಡಿದ ಶೆಟ್ಟರ್, ದೇವಸ್ಥಾನ ಹಾಗೂ ಪುಷ್ಕರಣಿಯ ಪರಂಪರೆ ಉಳಿಸುವುದೇ ತಮ್ಮ ಹೋರಾಟದ ಉದ್ದೇಶ ಎಂದು ಹೇಳಿದರು.
ತಾವು ಶಾಸಕನಾಗಿದ್ದ ಸಂದರ್ಭದಲ್ಲಿ ಭವಾನಿ ಶಂಕರ್ ದೇವಸ್ಥಾನದ ಅಭಿವೃದ್ಧಿಗಾಗಿ ಅನುದಾನ ನೀಡಿದ್ದಾಗಿ ತಿಳಿಸಿದ ಅವರು, ಪುಷ್ಕರಣಿ ಜಾಗದಲ್ಲಿ ಯಾವುದೇ ಕಾಮಗಾರಿ ನಡೆಸಿಲ್ಲ ಎಂದು ಸ್ಪಷ್ಟಪಡಿಸಿದರು.
ಪುಷ್ಕರಣಿ ವಿಚಾರದಲ್ಲಿ ಕಾಂಗ್ರೆಸ್ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದ ಶೆಟ್ಟರ್, ಒಂದು ಸಮುದಾಯದ ಓಲೈಕೆಗಾಗಿ ಈ ರೀತಿಯ ವಿವಾದ ಸೃಷ್ಟಿಸಲಾಗುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಈ ವಿಚಾರದಲ್ಲಿ ರಾಜಕೀಯ ಬಿಟ್ಟು ಐತಿಹಾಸಿಕ ಹಾಗೂ ಧಾರ್ಮಿಕ ಪರಂಪರೆಯನ್ನು ಉಳಿಸುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಪುಷ್ಕರಣಿ ಸ್ಥಳವನ್ನು ಕೂಡಲೇ ಪುರಾತತ್ವ ಇಲಾಖೆಯಿಂದ ಉತ್ಖನನ ಮಾಡಿಸಬೇಕು ಎಂದು ಶೆಟ್ಟರ್ ಒತ್ತಾಯಿಸಿದರು.
ಪುಷ್ಕರಣಿ ಜಾಗದ ಸುತ್ತ ನೂರು ಮೀಟರ್ ವ್ಯಾಪ್ತಿಯಲ್ಲಿ ಮನೆಗಳು ಅಥವಾ ಕಟ್ಟಡಗಳಿದ್ದರೆ, ಅವುಗಳ ಬಗ್ಗೆ ಸೂಕ್ತ ಪರಿಶೀಲನೆ ನಡೆಸಿ, ಅಗತ್ಯವಿದ್ದಲ್ಲಿ ಪರಿಹಾರ ನೀಡಿ ಸ್ಥಳಾಂತರಿಸುವ ಜವಾಬ್ದಾರಿ ರಾಜ್ಯ ಸರ್ಕಾರದ್ದಾಗಿದೆ ಎಂದರು.
ಒಟ್ಟಿನಲ್ಲಿ ಭವಾನಿ ಶಂಕರ್ ದೇವಸ್ಥಾನದ ಪುಷ್ಕರಣಿ ವಿವಾದ ಇದೀಗ ರಾಜಕೀಯ ಆರೋಪ-ಪ್ರತ್ಯಾರೋಪಕ್ಕೂ ಕಾರಣವಾಗಿದ್ದು, ಐತಿಹಾಸಿಕ ಪುಷ್ಕರಣಿಯ ಸಂರಕ್ಷಣೆ ಹಾಗೂ ಜಾಗದ ಕುರಿತ ದಾಖಲೆಗಳ ಆಧಾರದ ಮೇಲೆ ಮುಂದಿನ ಕ್ರಮಕ್ಕೆ ಒತ್ತಾಯ ಕೇಳಿಬಂದಿದೆ.
ಭವಾನಿ ಶಂಕರ್ ದೇವಸ್ಥಾನದ ಪುಷ್ಕರಣಿ ಉಳಿಸುವ ವಿಚಾರದಲ್ಲಿ ಯಾವುದೇ ರಾಜಕೀಯ ಇಲ್ಲ ಎಂದು ಸ್ಪಷ್ಟಪಡಿಸಿರುವ ಜಗದೀಶ್ ಶೆಟ್ಟರ್, ಪುರಾತತ್ವ ಇಲಾಖೆ ಮೂಲಕ ಪುಷ್ಕರಣಿ ಸ್ಥಳದ ಉತ್ಖನನಕ್ಕೆ ಆಗ್ರಹಿಸಿದ್ದಾರೆ. ಇದೀಗ ಸರ್ಕಾರ ಈ ವಿವಾದಕ್ಕೆ ಯಾವ ರೀತಿಯ ಪರಿಹಾರ ಕಂಡುಕೊಳ್ಳಲಿದೆ ಎಂಬುದೇ ಕುತೂಹಲ ಮೂಡಿಸಿದೆ.
