Political News: ಸಾಮಾಜಿಕ ನ್ಯಾಯಕ್ಕಾಗಿ ಒಳ ಮೀಸಲಾತಿ ಹೋರಾಟ ಸಮಿತಿ ಆಯೋಜಿಸಿದ್ದ “ಒಳ ಮೀಸಲಾತಿ ಕುರಿತ ವಿಚಾರ ಸಂಕಿರಣ” ಕಾರ್ಯಕ್ರಮದಲ್ಲಿ ಇಂದು ಮಾಜಿ ಸಿಎಂ ಸಿದ್ದರಾಮಯ್ಯ ಭಾಗವಹಿಸಿದ್ದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿರುವ ಅವರು, ಬೆಳಗಾವಿಯಲ್ಲಿ ನಡೆದ ಅಧಿವೇಶನದಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಅಭಿವೃದ್ಧಿ ಅನುದಾನ ಬಳಕೆ ಮಾಡಬೇಕು ಎಂಬ ಕಾನೂನನ್ನು ಮಾಡಿದ್ದು ನಮ್ಮ ಸರ್ಕಾರ. 2013ಕ್ಕಿಂತ ಮೊದಲು ಈ ವರ್ಗಗಳ ಜನರ ಕಲ್ಯಾಣ ಕಾರ್ಯಕ್ರಮಗಳಿಗೆ ಬಳಕೆಯಾಗುವ ಅನುದಾನ ಸರಿಸುಮಾರು 8,000 ಕೋಟಿ ರೂಪಾಯಿ ಇತ್ತು, ನಾನು ಈ ಕಾನೂನು ಜಾರಿ ಮಾಡಿದ ಮೇಲೆ ರೂ.15,000 ಕೋಟಿಯನ್ನು ಮೀರಿತು. ಈ ವರ್ಷ ಎಸ್.ಸಿ.ಪಿ/ಟಿ.ಎಸ್.ಪಿ ಗೆ ರೂ.44,636 ಕೋಟಿ ಇದೆ. ಇದೇ ಕೆಲಸವನ್ನು ಬೇರೆ ಸರ್ಕಾರಗಳು ಯಾಕೆ ಮಾಡಿಲ್ಲ? ಎಂದು ಪ್ರಶ್ನಿಸಿದ್ದಾರೆ.
ಈ ಕಾಯ್ದೆಯ ಭಾಗವಾಗಿದ್ದ 7ಡಿ ಅನ್ನು ರದ್ದು ಮಾಡಿದ್ದು ನಾನು. 4% ಬಡ್ಡಿಗೆ ಕೆಎಸ್ಎಫ್ಸಿ ಯಲ್ಲಿ 10 ಕೋಟಿ ರೂಪಾಯಿ ವರೆಗೆ ಸಾಲ ಸೌಲಭ್ಯ ಸಿಗುವಂತೆ ಮಾಡಿದ್ದು ನಮ್ಮ ಸರ್ಕಾರ. ಬದ್ಧತೆ ಇದ್ದಾಗ ಮಾತ್ರ ಇಂಥ ಕೆಲಸ ಮಾಡಲು ಸಾಧ್ಯ ಎನ್ನುವುದಕ್ಕೆ ಇದು ಉದಾಹರಣೆ. 2011ರ ಜನಗಣತಿ ಪ್ರಕಾರ ಪರಿಶಿಷ್ಟ ಜಾತಿ ಮತ್ತು ಪಂಗಡದವರು 24.1% ಇದ್ದಾರೆ. 6.95% ಎಸ್.ಟಿ ಹಾಗೂ 17.15% ಎಸ್.ಸಿ ಸಮುದಾಯದ ಜನರಿದ್ದಾರೆ. ಈಗಿನ ಸರ್ಕಾರದಲ್ಲಿ ಪರಮೇಶ್ವರ್ ಅವರನ್ನು ಉಪಮುಖ್ಯಮಂತ್ರಿ ಮಾಡಿದ್ದು ಯಾರು ಗೊತ್ತಾ? ನಾಲ್ಕೈದು ಜನರನ್ನು ಉಪಮುಖ್ಯಮಂತ್ರಿ ಮಾಡಬೇಕು ಎಂದು ಯೋಚನೆ ಮಾಡುತ್ತಿದ್ದರು, ಒಬ್ಬರಿಗೆ ಅವಕಾಶ ಕೊಡಬೇಕು ಎಂದು ಹೇಳಿದ್ದು ಯಾರು ಗೊತ್ತಾ?ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಬಡ್ತಿಯಲ್ಲಿ ಮೀಸಲಾತಿ ಬೇರೆ ಯಾವುದಾದರೂ ರಾಜ್ಯದಲ್ಲಿ ಇದೆಯಾ? ರತ್ನಪ್ರಭಾ ಅವರು ಮುಖ್ಯಕಾರ್ಯದರ್ಶಿಯಾಗಿರುವಾಗ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ ಮಾಡಿ, ವರದಿ ತರಿಸಿಕೊಂಡು, ವರದಿಯನ್ನು ಕಾನೂನಿನ ರೂಪದಲ್ಲಿ ಜಾರಿ ಮಾಡಿದ್ದು ನಮ್ಮ ಸರ್ಕಾರ. ಇದನ್ನು ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಿದ್ರು, ಆದರೆ ತೀರ್ಪು ನಮ್ಮ ಪರವಾಗಿ ಬಂತು. ಕರ್ನಾಟಕದಲ್ಲಿ ಮಾತ್ರ ಬಡ್ತಿಯಲ್ಲಿ ಮೀಸಲಾತಿ ಇದೆ. ಇದೆಲ್ಲಾ ಸಾದ್ಯವಾಗಿದ್ದು ಹೇಗೆ? ಮತ್ತು ಯಾರಿಂದ?
ನಾನು ಇಷ್ಟೆಲ್ಲಾ ಮಾಡಿದ್ರೂ ಒಳಮೀಸಲಾತಿ ಜಾರಿಗೆ ತರುವ ಮೊದಲು ಇಲ್ಲಿ ಸಭೆಯಲ್ಲೇ ಇರುವ ಹಲವರು ನನ್ನ ವಿರುದ್ಧ ಧಿಕ್ಕಾರ ಕೂಗಿದ್ದಾರೆ. ಅದಕ್ಕಾಗಿಯೇ ನಾನು ಅನೇಕ ಬಾರಿ “ಯಾರು ನಿಮ್ಮ ಪರ ಇರುವವರು, ಯಾರು ವಿರೋಧಿಗಳು ಎನ್ನುವುದನ್ನು ಗುರುತಿಸುವ ಕೆಲಸ ಮಾಡಬೇಕು” ಎಂದು ಹೇಳಿದ್ದೇನೆ. ನಾನು ಮಾಡಿರುವ ಕೆಲಸವನ್ನು ನರೇಂದ್ರ ಮೋದಿ ಅವರು ಯಾಕೆ ಮಾಡಿಲ್ಲ? ಎಂದು ಸಿದ್ದರಾಮಯ್ಯ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ನಾನು ಎಂದಿಗೂ ನಿಮ್ಮ ಜೊತೆ ಇರುತ್ತೇನೆ. ನಾನು ಚುನಾವಣಾ ರಾಜಕೀಯದಿಂದ ನಿವೃತ್ತಿಯಾದರೂ ಸಕ್ರಿಯ ರಾಜಕಾರಣದಲ್ಲಿ ಇರುತ್ತೇನೆ. ಒಳ ಮೀಸಲಾತಿ ಹೋರಾಟ ಮುಂದುವರೆಯಬೇಕು, ಗುರಿ ತಲುಪುವ ವರೆಗೆ ನಿಮ್ಮಲ್ಲಿನ ಭಿನ್ನಾಭಿಪ್ರಾಯಗಳನ್ನು ಮರೆತು ಜೊತೆಯಾಗಿ ಹೋರಾಟ ನಡೆಸಬೇಕು. ನಿಮ್ಮ ಸುತ್ತ ನಿಮ್ಮ ನಿಮ್ಮೊಳಗೆ ಬೆಂಕಿ ಹಚ್ಚುವ ಜನರಿದ್ದಾರೆ, ಜಾಗೃತೆಯಾಗಿರಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಕರೆ ನೀಡಿದ್ದಾರೆ.
