ಮೂವತ್ತು ವರ್ಷಗಳಲ್ಲೇ ಅತ್ಯಂತ ಭೀಕರವಾದ ಪ್ರವಾಹಕ್ಕೆ ನೆರೆಯ ನೇಪಾಳ ದೇಶ ತತ್ತರಿಸಿಹೋಗಿದೆ. ಈ ನೈಸರ್ಗಿಕ ವಿಕೋಪದಲ್ಲಿ ಸಾವಿನ ಸಂಖ್ಯೆ 392ಕ್ಕೆ ತಲುಪಿದ್ದರೆ, ಬರೋಬ್ಬರಿ 1500ಕ್ಕೂ ಅಧಿಕ ಮಂದಿ ನಾಪತ್ತೆಯಾಗಿದ್ದಾರೆ. ನೇಪಾಳದ ಆಧುನಿಕ ಇತಿಹಾಸದಲ್ಲೇ ಇದು ಅತ್ಯಂತ ದೊಡ್ಡ ದುರಂತವಾಗಿ ದಾಖಲಾಗಿದೆ.
ಹೌದು ‘ಬುಧವಾರ ಸಂಭವಿಸಿದ ಈ ಜಲಪ್ರಳಯದಿಂದಾಗಿ ಚಿತ್ರಾನ್, ನವಲ್‌ಪರಾಸಿ, ಧಾಡಿಂಗ್, ರಸುವಾ ಮತ್ತು ನುನಾಕೋಟ್ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಭಾರೀ ಸಾವುನೋವು ಸಂಭವಿಸಿವೆ. ಪ್ರವಾಸಕ್ಕೆ ತೆರಳಿದ್ದ 288 ಭಾರತೀಯರು ಸೇರಿದಂತೆ ನಾಪತ್ತೆಯಾಗಿರುವ ನೂರಾರು ಜನರಿಗಾಗಿ ರಕ್ಷಣಾ ಪಡೆಗಳು ತೀವ್ರ ಹುಡುಕಾಟ ನಡೆಸಿವೆ. ಈವರೆಗೆ ಸೈನಿಕರು ಹಾಗೂ ರಕ್ಷಣಾ ಸಿಬ್ಬಂದಿ 800ಕ್ಕೂ ಹೆಚ್ಚು ಜನರನ್ನು ಸುರಕ್ಷಿತವಾಗಿ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಭಾರೀ ಪ್ರವಾಹದ ರಭಸಕ್ಕೆ ಒಟ್ಟು 80ಕ್ಕೂ ಅಧಿಕ ಸೇತುವೆಗಳು ಕೊಚ್ಚಿಹೋಗಿವೆ. ಇದರೊಂದಿಗೆ ರಾಜಧಾನಿ ಕಠ್ಮಂಡುವನ್ನು ಸಂಪರ್ಕಿಸುವ ಮುಖ್ಯ ಹೆದ್ದಾರಿ ಸೇರಿದಂತೆ ನೂರಾರು ಕಿಲೋಮೀಟರ್ ರಸ್ತೆಗಳು ಜಲಸಮಾಧಿಯಾಗಿವೆ. ಪರಿಣಾಮವಾಗಿ ದೇಶದ ಪ್ರಮುಖ ಸಂಚಾರ ಸಂಪರ್ಕ ಸಂಪೂರ್ಣವಾಗಿ ಕಡಿತಗೊಂಡಿದೆ.
ಈ ಭೀಕರ ಪ್ರವಾಹದ ಅಲೆ ಕನ್ನಡಿಗರಿಗೂ ತಟ್ಟಿದ್ದು, ಬೆಂಗಳೂರು ಮೂಲದ 8 ಮಂದಿ ನಾಪತ್ತೆಯಾಗಿರುವ ಬಗ್ಗೆ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಸಂಕಷ್ಟದಲ್ಲಿರುವ ಕನ್ನಡಿಗರನ್ನು ಸುರಕ್ಷಿತವಾಗಿ ವಾಪಸ್ ಕರೆತರುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದ್ದು, ಕಠ್ಮಂಡುಗೆ ಹಿರಿಯ ಐಎಎಸ್ ಅಧಿಕಾರಿಗಳನ್ನು ಕಳುಹಿಸಲು ನಿರ್ಧರಿಸಿದೆ.
ಕನ್ನಡಿಗರ ಕುಟುಂಬಗಳ ನೆರವಿಗಾಗಿ ರಾಜ್ಯ ಸರ್ಕಾರ ಈಗಾಗಲೇ ತುರ್ತು ಸಹಾಯವಾಣಿಯನ್ನು ತೆರೆದಿದೆ. ಸಾರ್ವಜನಿಕರು 1070 ಅಥವಾ 080-22253707 ಸಂಖ್ಯೆಗಳನ್ನು ಸಂಪರ್ಕಿಸಬಹುದಾಗಿದೆ. ಪ್ರಕೃತಿಯ ಈ ರೌದ್ರಾವತಾರಕ್ಕೆ ಸಿಲುಕಿ ನರಳುತ್ತಿರುವ ನೇಪಾಳದ ಜನತೆ ಹಾಗೂ ಕನ್ನಡಿಗರ ರಕ್ಷಣೆಗೆ ಎಲ್ಲರೂ ಪ್ರಾರ್ಥಿಸೋಣ.
