ʼಕಾಲು ತೊಳೆದು ಸ್ವಾಗತ ಮಾಡ್ತೇನೆʼ – HDKಗೆ ಇಕ್ಬಾಲ್‌ ಬಿಗ್ ಇನ್ವಿಟೇಷನ್!

ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಮತ್ತೆ ರಾಜ್ಯ ರಾಜಕಾರಣಕ್ಕೆ ಮರಳುತ್ತಾರೆ ಎಂಬ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ, ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಕುತೂಹಲಕಾರಿ ಹೇಳಿಕೆ ನೀಡಿದ್ದಾರೆ.

ʼಕುಮಾರಸ್ವಾಮಿ ರಾಮನಗರಕ್ಕೆ ಬಂದರೆ ಅವರ ಕಾಲು ತೊಳೆದು ಸ್ವಾಗತ ಮಾಡುತ್ತೇನೆʼ ಎಂದು ವ್ಯಂಗ್ಯವಾಗಿ ಹೇಳಿದ್ದಾರೆ. ರಾಮನಗರದಲ್ಲಿ ಮಾತನಾಡಿದ ಇಕ್ಬಾಲ್ ಹುಸೇನ್, ಕುಮಾರಸ್ವಾಮಿ ರಾಜ್ಯ ರಾಜಕಾರಣಕ್ಕೆ ವಾಪಸ್ ಬಂದರೆ ತಮಗೆ ಸಂತೋಷವೇ. ಅವರು ರಾಮನಗರಕ್ಕೆ ಬಂದರೆ ಗೌರವದಿಂದ ಸ್ವಾಗತಿಸುತ್ತೇವೆ ಎಂದು ಕೌಂಟರ್ ಕೊಟ್ಟಿದ್ದಾರೆ.

ಇದೇ ವೇಳೆ ನೈಸ್ ರಸ್ತೆ ವಿಚಾರವಾಗಿ ಜೆಡಿಎಸ್ ನಡೆಸುತ್ತಿರುವ ಹೋರಾಟದ ವಿರುದ್ಧವೂ ಇಕ್ಬಾಲ್ ಹುಸೇನ್ ವಾಗ್ದಾಳಿ ನಡೆಸಿದರು. ಕೇಂದ್ರ ಸಚಿವರಂತಹ ಜವಾಬ್ದಾರಿಯುತ ಸ್ಥಾನದಲ್ಲಿರುವ ಕುಮಾರಸ್ವಾಮಿ ಅವರು ರಾಮನಗರದ ಅಭಿವೃದ್ಧಿ ಬಗ್ಗೆ ಹೆಚ್ಚು ಗಮನ ಹರಿಸಬೇಕು ಎಂದಿದ್ದಾರೆ. ʼರಾಮನಗರಕ್ಕೆ ಬೃಹತ್ ಕೈಗಾರಿಕೆಗಳನ್ನು ತರಬೇಕು, ಇಲ್ಲಿನ ಯುವಕರಿಗೆ ಉದ್ಯೋಗ ಸೃಷ್ಟಿಸಬೇಕು. ಆದರೆ ಅಭಿವೃದ್ಧಿಯ ಬಗ್ಗೆ ಯೋಚಿಸದೆ ಬಿಡದಿ ಮತ್ತು ನೈಸ್ ರಸ್ತೆ ವಿಚಾರದಲ್ಲೇ ಕಾಲ ಕಳೆಯುತ್ತಿದ್ದಾರೆʼ ಎಂದು ಟೀಕಿಸಿದ್ದಾರೆ.

ಇನ್ನು ಮಾಜಿ ಸಚಿವ ಬಿ. ನಾಗೇಂದ್ರ ರಾಜೀನಾಮೆ ವಿಚಾರದಲ್ಲೂ ಬಿಜೆಪಿ ವಿರುದ್ಧ ಇಕ್ಬಾಲ್ ಹುಸೇನ್ ಕಿಡಿಕಾರಿದ್ದಾರೆ. ನಾಗೇಂದ್ರ ಅವರು ಪಕ್ಷಕ್ಕೆ ಮುಜುಗರವಾಗಬಾರದು ಎಂಬ ಕಾರಣಕ್ಕೆ ಸ್ವಯಂಪ್ರೇರಣೆಯಿಂದ ರಾಜೀನಾಮೆ ನೀಡಿದ್ದಾರೆ. ಆರೋಪ ಸಾಬೀತಾದ ಕಾರಣಕ್ಕೆ ಅವರು ರಾಜೀನಾಮೆ ನೀಡಿಲ್ಲ ಎಂದು ಸಮರ್ಥಿಸಿಕೊಂಡರು. ಈಗಾಗಲೇ ನಾಗೇಂದ್ರ ಅವರಿಗೆ ಎಸ್‌ಐಟಿ ಕ್ಲೀನ್‌ಚಿಟ್ ನೀಡಿದೆ. ಹೀಗಾಗಿ ಬಿಜೆಪಿ ಮಾಡುತ್ತಿರುವ ಆರೋಪಗಳಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಹೇಳಿದರು.

ಇದೇ ವೇಳೆ ಬಿಜೆಪಿಗೆ ಮತ್ತೊಂದು ಪ್ರಶ್ನೆ ಹಾಕಿದ ಇಕ್ಬಾಲ್ ಹುಸೇನ್, ರಾಮ ಮಂದಿರ ನಿರ್ಮಾಣಕ್ಕೆ ಭಕ್ತರು ನೀಡಿದ ದೇಣಿಗೆಯಲ್ಲಿನ ಅಕ್ರಮದ ಆರೋಪಗಳ ಬಗ್ಗೆ ಬಿಜೆಪಿ ಯಾಕೆ ಮಾತನಾಡುತ್ತಿಲ್ಲ? ಎಂದು ಪ್ರಶ್ನಿಸಿದ್ದಾರೆ. ಕೇಂದ್ರ ಹಾಗೂ ಉತ್ತರ ಪ್ರದೇಶದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದರೂ ಈ ವಿಚಾರದಲ್ಲಿ ಏಕೆ ಕ್ರಮ ಕೈಗೊಂಡಿಲ್ಲ ಎಂದು ಪ್ರಶ್ನಿಸಿದ ಅವರು, ವಿಪಕ್ಷಗಳಿಗೆ ಜನರು ಮತ್ತು ರೈತರ ಸಮಸ್ಯೆಗಳಿಗಿಂತ ಸರ್ಕಾರಕ್ಕೆ ಕೆಟ್ಟ ಹೆಸರು ತರುವುದೇ ಮುಖ್ಯವಾಗಿದೆ ಎಂದು ಆರೋಪಿಸಿದ್ದಾರೆ. ಕುಮಾರಸ್ವಾಮಿ ಅವರ ರಾಜಕೀಯ ವಾಪಸಾತಿ, ನೈಸ್ ರಸ್ತೆ, ನಾಗೇಂದ್ರ ರಾಜೀನಾಮೆ ಹಾಗೂ ರಾಮ ಮಂದಿರದ ದೇಣಿಗೆ—ನಾಲ್ಕೂ ವಿಚಾರಗಳನ್ನು ಮುಂದಿಟ್ಟುಕೊಂಡು ಇಕ್ಬಾಲ್ ಹುಸೇನ್ ಬಿಜೆಪಿ ಮತ್ತು ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

About The Author