ನೇಪಾಳದ ಭೀಕರ ಪ್ರವಾಹದ ಬೆನ್ನಲ್ಲೇ ಈಗ ಅಮೆರಿಕದಲ್ಲೂ ಹಠಾತ್ ಪ್ರವಾಹ ಸೃಷ್ಟಿಯಾಗಿದೆ. ಅಮೆರಿಕದ ಜಗತ್ಪ್ರಸಿದ್ಧ ಗ್ರಾಂಡ್ ಕ್ಯಾನಿಯನ್ ರಾಷ್ಟ್ರೀಯ ಉದ್ಯಾನವನದಲ್ಲಿ ಸಂಭವಿಸಿದ ಈ ಭೀಕರ ದಿಢೀರ್ ಪ್ರವಾಹಕ್ಕೆ ಇಡೀ ಪ್ರದೇಶವೇ ತಲ್ಲಣಗೊಂಡಿದ್ದು, ಶನಿವಾರ ಮಧ್ಯಾಹ್ನ ಅಪ್ಪಳಿಸಿದ ಈ ಜಲಪ್ರಳಯದಲ್ಲಿ 20ಕ್ಕೂ ಹೆಚ್ಚು ಪ್ರವಾಸಿಗರು ಹಾಗೂ ಚಾರಣಿಗರು ಕಾಣೆಯಾಗಿದ್ದಾರೆ. ಅವರ ಪತ್ತೆಗಾಗಿ ಈಗ ತೀವ್ರ ಹುಡುಕಾಟ ನಡೆಸಲಾಗುತ್ತಿದೆ ಎಂದು ಕೇಳಿ ಬಂದಿದೆ.
ಕೊಲೊರಾಡೋ ನದಿಗೆ ಸೇರುವ ಬ್ರೈಟ್ ಏಂಜೆಲ್ ಕ್ರೀಕ್ ಪ್ರದೇಶದಲ್ಲಿ ಶನಿವಾರ ಮಧ್ಯಾಹ್ನ ಸುಮಾರು ಎರಡೂವರೆ ಗಂಟೆಯ ವೇಳೆಗೆ ಈ ಅನಿರೀಕ್ಷಿತ ದುರಂತ ಸಂಭವಿಸಿದೆ. ಕೇವಲ 30 ನಿಮಿಷಗಳಲ್ಲಿ ಅರ್ಧದಿಂದ ಒಂದು ಇಂಚಿನಷ್ಟು ಬಿದ್ದ ಭಾರಿ ಮಳೆಯಿಂದಾಗಿ ಕುಸಿದ ಜಲಧಾರೆ, ಕಡಿದಾದ ಬಂಡೆಗಳ ನಡುವೆ ರಭಸವಾಗಿ ಧುಮ್ಮಿಕ್ಕಿದೆ. ನಾರ್ತ್ ರಿಮ್‌ನಿಂದ ಕೊಲೊರಾಡೋ ನದಿಯವರೆಗೆ ಸುಮಾರು 6 ಸಾವಿರ ಅಡಿಗಳಷ್ಟು ಕಡಿದಾದ ಇಳಿಜಾರಿನಲ್ಲಿ ಮಳೆ ನೀರು ತಕ್ಷಣವೇ ಹರಿದು ಬಂದಿದ್ದೇ ಈ ತಕ್ಷಣದ ಫ್ಲಡ್‌ಗೆ ಕಾರಣ ಎಂದು ಅಮೆರಿಕದ ಹವಾಮಾನ ಇಲಾಖೆಯ ತಜ್ಞರು ತಿಳಿಸಿದ್ದಾರೆ.
ಈ ಪ್ರವಾಹದ ರಭಸಕ್ಕೆ ಬೃಹತ್ ಗಾತ್ರದ ಬಂಡೆಗಳು, ಮರದ ದಿಮ್ಮಿಗಳು ಹಾಗೂ ಲೋಹದ ಕಂಬಗಳು ನದಿಯಲ್ಲಿ ಕೊಚ್ಚಿಕೊಂಡು ಹೋಗಿವೆ. ನದಿಯ ಮೇಲಿದ್ದ ಕಾಲುಸಂಕಗಳು ಅಥವಾ ಫುಟ್‌ಬ್ರಿಡ್ಜ್‌ಗಳು ಸಂಪೂರ್ಣವಾಗಿ ನಾಶವಾಗಿದ್ದು, ಕ್ರೀಕ್ ತನ್ನ ಸ್ವರೂಪವನ್ನೇ ಬದಲಾಯಿಸಿಕೊಂಡು ಹೊಸ ರಭಸದ ನದಿಯಂತೆ ಮಾರ್ಪಟ್ಟಿದೆ. ಕ್ಯಾಂಪ್ ಗ್ರೌಂಡ್‌ನಲ್ಲಿದ್ದ ಪ್ರವಾಸಿಗರು ನೋಡನೋಡುತ್ತಿದ್ದಂತೆಯೇ ಬಂಕ್‌ಹೌಸ್‌ಗಳಂತಹ ಕಟ್ಟಡಗಳ ಭಾಗಗಳು ನೀರಿನಲ್ಲಿ ಕೊಚ್ಚಿಹೋಗಿವೆ.
ಅದೃಷ್ಟವಶಾತ್, ಭಾನುವಾರ ಬೆಳಗಿನ ವೇಳೆಗೆ ಸ್ಥಳೀಯ ಆಡಳಿತ ಮತ್ತು ಗ್ರಾಂಡ್ ಕ್ಯಾನಿಯನ್ ನ್ಯಾಷನಲ್ ಪಾರ್ಕ್ ಸರ್ವಿಸ್ ಅಧಿಕಾರಿಗಳು ಹೆಲಿಕಾಪ್ಟರ್ ಮೂಲಕ ಕಾರ್ಯಾಚರಣೆ ನಡೆಸಿ, ಫ್ಯಾಂಟಮ್ ರಾಂಚ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿದ್ದ ಬರೋಬ್ಬರಿ 62 ಜನರನ್ನು ಸುರಕ್ಷಿತವಾಗಿ ಸ್ಥಳಾಂತರಿಸಿದ್ದಾರೆ. ಸದ್ಯಕ್ಕೆ ಯಾವುದೇ ಪ್ರಾಣಾಪಾಯ ಅಥವಾ ಗಾಯಗಳಾದ ಬಗ್ಗೆ ಅಧಿಕೃತ ವರದಿಯಾಗಿಲ್ಲ.
ಪ್ರಸ್ತುತ ಅರಿಝೋನಾ ರಾಜ್ಯದ ಅಧಿಕಾರಿಗಳು ಮತ್ತು ಪಾರ್ಕ್ ಸಿಬ್ಬಂದಿ ಕಾಣೆಯಾಗಿರುವ 20ಕ್ಕೂ ಹೆಚ್ಚು ಜನರಿಗಾಗಿ ಜಂಟಿ ಶೋಧ ಕಾರ್ಯವನ್ನು ತೀವ್ರಗೊಳಿಸಿದ್ದು, ಈ ಪ್ರದೇಶದಲ್ಲಿ ಚಾರಣ ಕೈಗೊಂಡಿದ್ದವರ ಮಾಹಿತಿ ಇದ್ದರೆ ಕೂಡಲೇ ತಿಳಿಸುವಂತೆ ಸಾರ್ವಜನಿಕರಲ್ಲಿ ವಿನಂತಿಸಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಬ್ರೈಟ್ ಏಂಜೆಲ್ ಕ್ಯಾಂಪ್‌ಗ್ರೌಂಡ್, ಫ್ಯಾಂಟಮ್ ರಾಂಚ್ ಹಾಗೂ ನಾರ್ತ್ ಕೈಬಾಬ್ ಟ್ರೇಲ್‌ನ ಭಾಗಗಳನ್ನು ಪ್ರವಾಸಿಗರಿಗೆ ಸಂಪೂರ್ಣವಾಗಿ ಮುಚ್ಚಲಾಗಿದೆ. ಜೊತೆಗೆ ಕೊಲೊರಾಡೋ ನದಿಯಲ್ಲಿ ನಡೆಯುತ್ತಿದ್ದ ಸಾಹಸಿ ದೋಣಿ ವಿಹಾರ ಅಂದರೆ ರಾಫ್ಟಿಂಗ್ ಅನ್ನು ಸಹ ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ.
ಸೋಮವಾರದವರೆಗೂ ಈ ಪ್ರದೇಶದಲ್ಲಿ ಭಾರಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದ್ದು, ಮತ್ತಷ್ಟು ಪ್ರವಾಹ ಹಾಗೂ ಕಲ್ಲುಗಳು ಕುಸಿಯುವ ಅಪಾಯವಿದೆ ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.




