ಸೆಪ್ಟೆಂಬರ್ ತಿಂಗಳು ಆರಂಭವಾಗುತ್ತಿದ್ದಂತೆಯೇ ದೇಶಾದ್ಯಂತ ಅಡುಗೆ ಅನಿಲ ಹಾಗೂ ಕೊಳವೆ ಅನಿಲ ಪೂರೈಕೆ, ಬೆಲೆ ಪರಿಷ್ಕರಣೆ ಮತ್ತು ಇ-ಕೆವೈಸಿ ಪ್ರಕ್ರಿಯೆಗಳಿಗೆ ಸಂಬಂಧಿಸಿದಂತೆ ಹಲವು ಪ್ರಮುಖ ನಿಯಮಗಳು ಜಾರಿಗೆ ಬಂದಿವೆ.
ಪ್ರಮುಖವಾಗಿ, ಎಲ್ಪಿಜಿ ರೀಫಿಲ್ ಪಡೆಯಲು ನಗರ ಪ್ರದೇಶದ ಜನರು 25 ದಿನ ಹಾಗೂ ಗ್ರಾಮೀಣ ಪ್ರದೇಶದ ಜನರು 45 ದಿನ ಕಾಯಬೇಕಾದ ನಿಯಮ ಜಾರಿಯಲ್ಲಿದೆ. ಇನ್ನು ಗೃಹ ಬಳಕೆಯ ಸಿಲಿಂಡರ್ ಸಂಪರ್ಕದಾರರು ತಮ್ಮ ಇ-ಕೆವೈಸಿ ಪೂರ್ಣಗೊಳಿಸಲು ಆಗಸ್ಟ್ 31 ಕೊನೆಯ ದಿನಾಂಕವಾಗಿದ್ದು, ಒಂದು ವೇಳೆ ಇ-ಕೆವೈಸಿ ಮಾಡಿಸದಿದ್ದರೆ ವಾಣಿಜ್ಯ ದರದಲ್ಲಿ ಸಿಲಿಂಡರ್ ಖರೀದಿಸಬೇಕಾದ ಅನಿವಾರ್ಯತೆ ಎದುರಾಗುತ್ತದೆ.
ಅದಲ್ಲದೆ, ಯಾವುದೇ ಪ್ರದೇಶದಲ್ಲಿ ಪಿಎನ್ಜಿ ಅಂದ್ರೆ ಕೊಳವೆ ಅನಿಲ ಮೂಲಸೌಕರ್ಯ ಲಭ್ಯವಿದ್ದರೆ, ಅಲ್ಲಿನ ಗ್ರಾಹಕರು ಎಲ್ಪಿಜಿ ಬದಲು ಕಡ್ಡಾಯವಾಗಿ ಪಿಎನ್ಜಿ ಬಳಸಬೇಕಾಗುತ್ತದೆ. ಒಂದು ವೇಳೆ ಎಲ್ಪಿಜಿ ಮತ್ತು ಪಿಎನ್ಜಿ ಎರಡೂ ಸಂಪರ್ಕ ಹೊಂದಿರುವ ಗ್ರಾಹಕರಿಗೆ, ತಮ್ಮ ಎಲ್ಪಿಜಿ ಸಂಪರ್ಕವನ್ನು ಹಸ್ತಾಂತರಿಸಲು ಅಥವಾ ವಾಪಸ್ ನೀಡಲು ಸರ್ಕಾರ 30 ದಿನಗಳ ಕಾಲಾವಕಾಶ ನೀಡಿದೆ.
ಇನ್ನು ಬೆಲೆ ಪರಿಷ್ಕರಣೆಯ ವಿಚಾರಕ್ಕೆ ಬರುವುದಾದರೆ, ತೈಲ ಮಾರುಕಟ್ಟೆ ಕಂಪನಿಗಳು ಪ್ರತಿ ತಿಂಗಳ ಆರಂಭದಲ್ಲಿ 14.2 ಕೆಜಿ ಗೃಹ ಬಳಕೆಯ ಹಾಗೂ 19 ಕೆಜಿ ವಾಣಿಜ್ಯ ಬಳಕೆಯ ಸಿಲಿಂಡರ್ಗಳ ಬೆಲೆಗಳನ್ನು ಪರಿಷ್ಕರಿಸುತ್ತವೆ. ಈಗಾಗಲೇ ಆಗಸ್ಟ್ ತಿಂಗಳ ಆರಂಭದಲ್ಲಿ ದೆಹಲಿಯಲ್ಲಿ ಗೃಹ ಬಳಕೆಯ ಸಿಲಿಂಡರ್ ದರ 942 ರೂಪಾಯಿಗಳಷ್ಟಿದ್ದರೆ, ವಾಣಿಜ್ಯ ಸಿಲಿಂಡರ್ ದರ 2,738 ರೂಪಾಯಿ ತಲುಪಿತ್ತು. ಈಗ ಸೆಪ್ಟೆಂಬರ್ ಆರಂಭದಲ್ಲೂ ಬೆಲೆಗಳಲ್ಲಿ ಹೊಸ ಬದಲಾವಣೆಗಳಾಗಲಿವೆ.
ಕೊನೆಯದಾಗಿ, ಪಶ್ಚಿಮ ಏಷ್ಯಾಕ್ಕೊದಗಿದ ಬಿಕ್ಕಟ್ಟು ಹಾಗೂ ಹಾರ್ಮುಜ್ ಜಲಸಂಧಿ ಬಂದ್ ಆಗಿರುವ ಹಿನ್ನೆಲೆಯಲ್ಲಿ ಜಾಗತಿಕ ಇಂಧನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಈ ಕಾರಣದಿಂದ ಮಾರ್ಚ್ 2026 ರಿಂದಲೇ ಹೊಸ ಗೃಹ ಬಳಕೆಯ ಎಲ್ಪಿಜಿ ಸಂಪರ್ಕಗಳನ್ನು ನೀಡುವುದನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ.




