ಕರ್ನಾಟಕ ರಾಜಕಾರಣದಲ್ಲಿ ಮತ್ತೊಮ್ಮೆ ರಣಕಹಳೆ ಮೊಳಗಿದೆ. ರಾಜ್ಯ ಸರಕಾರದ ವಿರುದ್ಧ ಸೆಪ್ಟೆಂಬರ್ 1ರಿಂದ ಬಿಜೆಪಿ ಬೃಹತ್ ‘ಬಳ್ಳಾರಿ ಚಲೋ’ ರಾಯಚೂರು-ಬಳ್ಳಾರಿ ಪಾದಯಾತ್ರೆಯನ್ನು ಹಮ್ಮಿಕೊಂಡಿದೆ. ಇದಕ್ಕೆ ಕೌಂಟರ್ ಕೊಡಲು ಸಿದ್ಧವಾಗಿರುವ ಆಡಳಿತರೂಢ ಕಾಂಗ್ರೆಸ್, ಬಿಜೆಪಿ ನಾಯಕರ ಅಕ್ರಮಗಳ ದಾಖಲೆಗಳನ್ನು ಬಿಡುಗಡೆ ಮಾಡಲು ಭರ್ಜರಿ ಪ್ಲಾನ್ ಮಾಡಿದೆ ಅಂತ ಹೇಳಲಾಗ್ತಿದೆ.
ವಾಲ್ಮೀಕಿ ನಿಗಮದಲ್ಲಿ ನಡೆದ ಅವ್ಯವಹಾರ, ಎಸ್ಸಿ-ಎಸ್ಟಿ ಹಾಗೂ ಟಿಎಸ್ಪಿ ಹಣ ದುರ್ಬಳಕೆ ಮತ್ತು ಕಾಂಗ್ರೆಸ್ ಸರಕಾರದ ಭ್ರಷ್ಟಾಚಾರ ಹಾಗೂ ದುರಾಡಳಿತದ ವಿರುದ್ಧ ಬಿಜೆಪಿ ಈ ಹತ್ತು ದಿನಗಳ ಪಾದಯಾತ್ರೆಯನ್ನು ರೂಪಿಸಿದೆ. ಮೂಲತಃ ಈ ಪಾದಯಾತ್ರೆಯನ್ನು ಪ್ರಕಟಿಸುವ ಸಂದರ್ಭದಲ್ಲಿ ಮಾಜಿ ಸಚಿವ ಬಿ. ನಾಗೇಂದ್ರ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರಲಿಲ್ಲ. ಅವರ ರಾಜೀನಾಮೆಯನ್ನು ಮುಖ್ಯ ಕೇಂದ್ರಿಕರಿಸಿಕೊಂಡು ಪಾದಯಾತ್ರೆ ನಡೆಸುವುದು ಬಿಜೆಪಿಯ ಮುಖ್ಯ ಯೋಚನೆಯಾಗಿತ್ತು.
ಈಗ ನಾಗೇಂದ್ರ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರೂ ಸಹ, ಬಿಜೆಪಿಯು ತನ್ನ ಪಾದಯಾತ್ರೆಯಿಂದ ಹಿಂದೆ ಸರಿದಿಲ್ಲ. ಬದಲಿಗೆ ಸರಕಾರದ ಇನ್ನಿತರ ವೈಫಲ್ಯಗಳ ವಿರುದ್ಧ ಹೋರಾಟ ಮುಂದುವರಿಸಲು ತೀರ್ಮಾನಿಸಿದೆ. ಬಿಜೆಪಿಯ ಈ ತಂತ್ರಕ್ಕೆ ತಕ್ಕ ಪ್ರತಿತಂತ್ರ ನೀಡಲು ಕಾಂಗ್ರೆಸ್ ಕೂಡ ಸಜ್ಜಾಗಿದ್ದು, ಅದಕ್ಕಾಗಿ ರಣತಂತ್ರ ರೂಪಿಸಿಕೊಂಡಿದೆ.
ಪಾದಯಾತ್ರೆ ಆರಂಭವಾಗುವ ದಿನದಂದೇ ಬಳ್ಳಾರಿಯಲ್ಲಿ ಮಾಜಿ ಸಚಿವ ಬಿ. ನಾಗೇಂದ್ರ, ರಾಜ್ಯಸಭೆ ಸದಸ್ಯ ಡಾ. ಸಯ್ಯದ್ ನಾಸೀರ್ ಹುಸೇನ್, ನಗರ ಶಾಸಕ ನಾರಾ ಭರತ್ ರೆಡ್ಡಿ ಸಹಿತ ಹಲವು ಜನಪ್ರತಿನಿಧಿಗಳು ಸುದ್ದಿಗೋಷ್ಠಿ ನಡೆಸಿ ಬಿಜೆಪಿಗೆ ಕೌಂಟರ್ ನೀಡಲು ಸಜ್ಜಾಗಿದ್ದಾರೆ. ವಾಸ್ತವವಾಗಿ ನಾಗೇಂದ್ರ ರಾಜೀನಾಮೆ ಬಳಿಕ ಬಿಜೆಪಿ ಪಾದಯಾತ್ರೆ ರದ್ದಾಗಬಹುದು ಎಂಬುದು ಕಾಂಗ್ರೆಸ್ನವರ ನಿರೀಕ್ಷೆಯಾಗಿತ್ತು. ಆದರೆ ಅದು ಸುಳ್ಳಾಗಿದ್ದರಿಂದ, ಈಗ ಕಾಂಗ್ರೆಸ್ ನಾಯಕರು ರಾಜ್ಯ ಬಿಜೆಪಿ ವರಿಷ್ಠರ ಅಕ್ರಮಗಳ ಕುರಿತ ಹಲವು ಸ್ಪೋಟಕ ದಾಖಲೆಗಳನ್ನು ಬಹಿರಂಗಪಡಿಸುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಈ ಕುರಿತು ಮಾತನಾಡಿರುವ ಯತೀಂದ್ರ ಸಿದ್ದರಾಮಯ್ಯ, “ವಾಲ್ಮೀಕಿ ಹಗರಣ ವಿಷಯ ಮುಂದಿಟ್ಟು ಇಷ್ಟು ದಿನಗಳ ಕಾಲ ನಾಗೇಂದ್ರ ಅವರ ರಾಜೀನಾಮೆ ಕೇಳಿದ್ದ ಬಿಜೆಪಿಯವರು, ಅವರು ಪದತ್ಯಾಗ ಮಾಡಿದ ಬಳಿಕವೂ ಪಾದಯಾತ್ರೆ ಮಾಡಲು ಹೊರಟಿದ್ದಾರೆ. ಇದರಲ್ಲಿ ಕೇವಲ ಅವರ ರಾಜಕೀಯ ಪ್ರಚಾರದ ಉದ್ದೇಶವಿದೆಯಷ್ಟೇ” ಎಂದು ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ.
ಸದ್ಯ ‘ಬಿಜೆಪಿ ಪಾದಯಾತ್ರೆ ಹಾಗೂ ಕಾಂಗ್ರೆಸ್ನ ಅಕ್ರಮ ದಾಖಲೆಗಳ ಬಾಂಬ್ ರಾಜಕೀಯ ಅಖಾಡವನ್ನು ಮತ್ತಷ್ಟು ರಂಗೇರಿಸಿದ್ದು, ಮುಂದಿನ ದಿನಗಳಲ್ಲಿ ಯಾವೆಲ್ಲಾ ಸ್ಫೋಟಕ ಸಂಗತಿಗಳು ಹೊರಬರಲಿವೆ ಎಂಬುದನ್ನ ಕಾದು ನೋಡಬೇಕಿದೆ.




