Haveri News: ಹಾವೇರಿ ತಾಲೂಕಿನ ಕರ್ಜಗಿ ಗ್ರಾಮದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವವನ್ನು ಭಕ್ತಿಭಾವದಿಂದ ಆಚರಿಸಲಾಯಿತು. ಮೂರು ದಿನಗಳ ಕಾಲ ನಡೆದ ಆರಾಧನಾ ಮಹೋತ್ಸವದ ಅಂಗವಾಗಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಮಧ್ಯಾರಾಧನೆ ಪ್ರಯುಕ್ತ ನಡೆದ ರಥೋತ್ಸವದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು ರಾಯರ ಜಯಘೋಷ ಮೊಳಗಿಸಿದರು.
ತಾಲೂಕಿನ ಕರ್ಜಗಿ ಗ್ರಾಮದ ರೈಲ್ವೆ ನಿಲ್ದಾಣದ ಬಳಿ ಇರುವ ಶ್ರೀಹರಿ ವಿಠ್ಠಲಾಶ್ರಮ ಹಾಗೂ ಶ್ರೀ ವಿಶ್ವೇಶ್ವತೀರ್ಥ ಗುರುಕುಲದ ಸಂಯುಕ್ತ ಆಶ್ರಯದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ಮೂರು ದಿನಗಳ ಆರಾಧನಾ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು.
ಆರಾಧನಾ ಮಹೋತ್ಸವದ ಅಂಗವಾಗಿ ಪ್ರತಿದಿನ ಅಷ್ಟೋತ್ತರ ಪಾರಾಯಣ, ಪಂಚಾಮೃತ ಅಭಿಷೇಕ, ವಿಶೇಷ ಅಲಂಕಾರ, ಅರ್ಚನೆ, ಹಸ್ತೋದಕ, ಹರಿವಾಣ ಸೇವೆ, ತೊಟ್ಟಿಲೋತ್ಸವ, ದೀಪೋತ್ಸವ, ಹರಿನಾಮ ಸಂಕೀರ್ತನೆ, ರಾಯರ ಸಂಸ್ಮರಣೆ ಹಾಗೂ ತೀರ್ಥಪ್ರಸಾದ ವಿತರಣೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು.
ಮಧ್ಯಾರಾಧನೆ ಪ್ರಯುಕ್ತ ಭಾನುವಾರ ಶ್ರೀ ರಾಘವೇಂದ್ರ ಸ್ವಾಮಿಗಳ ರಥೋತ್ಸವ ಅದ್ಧೂರಿಯಾಗಿ ನಡೆಯಿತು. ಪುಷ್ಪಾಲಂಕೃತಗೊಂಡ ಭವ್ಯ ರಥವನ್ನು ಸಾವಿರಾರು ಭಕ್ತರು ರಾಯರ ಜಯಘೋಷ ಹಾಗೂ ಭಜನೆಗಳೊಂದಿಗೆ ಎಳೆದು ಭಕ್ತಿಭಾವ ಮೆರೆದರು.
ಇದೇ ವೇಳೆ ಶ್ರೀ ವಿಶ್ವೇಶ್ವತೀರ್ಥ ಗುರುಕುಲದ ವಿದ್ಯಾರ್ಥಿಗಳಿಂದ ಧಾರ್ಮಿಕ ನಾಟಕ ಪ್ರದರ್ಶನ ನಡೆಯಿತು. ರಾಯರ ಭಕ್ತವೃಂದದಿಂದ ಸಂಗೀತ ಕಛೇರಿ, ಭರತನಾಟ್ಯ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ವಿದ್ವಾನ್ ಅಕ್ಷಯ ಮನ್ನಾರಿ ಹಾಗೂ ವಿದ್ವಾನ್ ಧೀರೇಂದ್ರ ಲಕ್ಷ್ಮೇಶ್ವರ ಅವರ ನೇತೃತ್ವದಲ್ಲಿ ಆರಾಧನಾ ಮಹೋತ್ಸವದ ಧಾರ್ಮಿಕ ವಿಧಿ-ವಿಧಾನಗಳು ನೆರವೇರಿದವು.
ಪ್ರತಿ ವರ್ಷ ಹರಿವಿಠ್ಠಲಾಶ್ರಮದ ಭಕ್ತರ ಸಹಕಾರದಲ್ಲಿ ನಡೆಯುವ ಈ ಆರಾಧನಾ ಕಾರ್ಯಕ್ರಮದಲ್ಲಿ ಟ್ರಸ್ಟ್ ಸದಸ್ಯರು, ಭಕ್ತರು, ಸ್ಥಳೀಯರು ಹಾಗೂ ಸಿಬ್ಬಂದಿ ವರ್ಗದವರು ಭಾಗವಹಿಸಿ ವಿಶೇಷ ಸೇವೆ ಸಲ್ಲಿಸಿದರು.




