ಮುಡಾ ಪ್ರಕರಣದಲ್ಲಿ ಇದೀಗ ಮತ್ತೊಂದು ಬಿಗ್ ಟ್ವಿಸ್ಟ್ ಎದುರಾಗಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಂಬಂಧಿಸಿದ ಮುಡಾ ಕೇಸ್‌ನಲ್ಲಿ ಇಡಿ ಪರ ವಕೀಲರು ಹೈಕೋರ್ಟ್‌ನಲ್ಲಿ ಮಾಡಿರುವ ವಾದ ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ. ಮಂಗಳವಾರ ನಡೆದ ವಿಚಾರಣೆ ವೇಳೆ ಜಾರಿ ನಿರ್ದೇಶನಾಲಯದ ಪರ ಎಎಸ್‌ಜಿ ಅರವಿಂದ್ ಕಾಮತ್, ಲೋಕಾಯುಕ್ತ ಸಲ್ಲಿಸಿರುವ ಬಿ ರಿಪೋರ್ಟ್‌ನಲ್ಲಿ ಹಲವು ಪ್ರಮುಖ ಅಂಶಗಳನ್ನು ಪರಿಗಣಿಸಿಲ್ಲ ಎಂದು ವಾದಿಸಿದ್ದಾರೆ.
ವಿಶೇಷವಾಗಿ, ಕಾನೂನುಬಾಹಿರ ಡಿನೋಟಿಫಿಕೇಷನ್ ಬಗ್ಗೆ ಸಮರ್ಪಕವಾಗಿ ತನಿಖೆ ನಡೆದಿಲ್ಲ. ಭೂ ಪರಿವರ್ತನೆ ಕಾನೂನುಬಾಹಿರವಾಗಿದ್ದ ವಿಚಾರವನ್ನೂ ಪರಿಗಣಿಸಿಲ್ಲ. ಜೊತೆಗೆ, ಇಡಿ ತನಿಖೆಯಲ್ಲಿ ಬೆಳಕಿಗೆ ಬಂದ ಅಂಶಗಳನ್ನು ಲೋಕಾಯುಕ್ತ ತನಿಖಾಧಿಕಾರಿಗಳು ಗಮನಿಸಿಲ್ಲ ಎಂದು ಇಡಿ ಪರ ವಕೀಲರು ಕೋರ್ಟ್‌ಗೆ ತಿಳಿಸಿದ್ದಾರೆ ಎನ್ನಲಾಗ್ತಿದೆ. ED ಪರ ವಾದ ಆಲಿಸಿದ ಹೈಕೋರ್ಟ್ ಏಕಸದಸ್ಯ ಪೀಠ, ವಿಚಾರಣೆಯನ್ನು ಇಂದು ಮಧ್ಯಾಹ್ನ 2.30ಕ್ಕೆ ಮುಂದೂಡಿತ್ತು. ಹೀಗಾಗಿ, ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಇಂದು ಕೋರ್ಟ್ ಯಾವ ಆದೇಶ ನೀಡಲಿದೆ ಎಂಬುದು ಕುತೂಹಲ ಮೂಡಿಸಿದೆ.
ಅಂದಹಾಗೆ, ಸಿದ್ದರಾಮಯ್ಯ ಅವರು ತಮ್ಮ ರಾಜಕೀಯ ಪ್ರಭಾವ ಮತ್ತು ಅಧಿಕಾರ ದುರುಪಯೋಗಪಡಿಸಿಕೊಂಡು ಅಕ್ರಮವಾಗಿ ಮುಡಾ ನಿವೇಶನ ಹಂಚಿಕೆ ಮಾಡಿಸಿದ್ದಾರೆ ಎಂದು ಆರೋಪಿಸಿ ಸ್ನೇಹಮಯಿ ಕೃಷ್ಣ 2024ರ ಜುಲೈನಲ್ಲಿ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ತನಿಖೆ ಬಳಿಕ ಲೋಕಾಯುಕ್ತ ಬಿ ರಿಪೋರ್ಟ್ ಸಲ್ಲಿಸಿತ್ತು. ಈ ಬಿ ರಿಪೋರ್ಟ್ ಅಂಗೀಕರಿಸಿದ ವಿಶೇಷ ನ್ಯಾಯಾಲಯದ ಆದೇಶವನ್ನೇ ಪ್ರಶ್ನಿಸಿ ಸ್ನೇಹಮಯಿ ಕೃಷ್ಣ ಹೈಕೋರ್ಟ್ ಮೊರೆ ಹೋಗಿದ್ದರು.
ಸ್ವತಂತ್ರ ತನಿಖಾ ಸಂಸ್ಥೆಯಿಂದ ಮರುತನಿಖೆ ನಡೆಸಬೇಕು ಎಂಬುದು ಅವರ ಪ್ರಮುಖ ಮನವಿಯಾಗಿದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಇಡಿಯೂ ಅರ್ಜಿ ಸಲ್ಲಿಸಿದೆ. ಹೀಗಾಗಿ, ನಂತರದಲ್ಲಿ ಹೊರಬರಲಿರುವ ಹೈಕೋರ್ಟ್ ಆದೇಶದ ಮೇಲೆ ಎಲ್ಲರ ಕಣ್ಣು ನೆಟ್ಟಿದೆ ಅಂತಾನೆ ಹೇಳಬಹುದು. ಜೊತೆಗೆ ‘ಕೋರ್ಟ್ ತೀರ್ಪು ಮುಡಾ ಪ್ರಕರಣಕ್ಕೆ ಯಾವ ತಿರುವು ನೀಡಲಿದೆ ಅನ್ನೋದು ಇದೀಗ ಎಲ್ಲರ ಮುಂದಿರುವ ಕುತೂಹಲದ ವಿಚಾರವಾಗಿದೆ.




