Hubli News: ಹುಬ್ಬಳ್ಳಿಯಲ್ಲಿ ಹಾಡಹಗಲೇ ನಡು ರಸ್ತೆಯಲ್ಲಿ ಯುವಕನ ಮಾರಕಾಸ್ತ್ರಗಳಿಂದ ಭೀಕರ ಹತ್ಯೆ ಪ್ರಕರಣಕ್ಕೆ ರೋಚಕ ಟ್ವಿಸ್ಟ್ ಸಿಕ್ಕಿದೆ. ದಾದಾಪೀರ್ ಹತ್ಯೆ ಪ್ರಕರಣದಲ್ಲಿ ಒಟ್ಟು ಆರು ಜನರನ್ನು ಪೊಲೀಸರು ಬಂಧಿಸಿದ್ದಾರೆ. 2015ರ ಹತ್ಯೆ ಪ್ರಕರಣದ ಹಳೆಯ ದ್ವೇಷವೇ ಈ ಕೊಲೆಗೆ ಕಾರಣ ಎಂಬ ಶಂಕೆ ವ್ಯಕ್ತವಾಗಿದ್ದು, ಪ್ರಕರಣದ ಹಿಂದೆ ಸಿನಿಮಾ ಶೈಲಿಯ ಸಂಚು ಬಯಲಾಗಿದೆ.
ಹುಬ್ಬಳ್ಳಿ ನಡು ರಸ್ತೆಯಲ್ಲಿ ಹಾಡಹಗಲೇ ದಾದಾಪೀರ್ನನ್ನು ಮಾರಕಾಸ್ತ್ರಗಳಿಂದ ಹತ್ಯೆ ಮಾಡಲಾಗಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ತನಿಖೆ ನಡೆಸಿ, ಹತ್ಯೆಯ ಹಿಂದಿನ ಸಂಚಿನ ಜಾಡು ಹಿಡಿದಿದ್ದಾರೆ.
ಹತ್ಯೆಯಾಗಿರುವ ದಾದಾಪೀರ್ ಸಣ್ಣ ಪ್ರಮಾಣದಲ್ಲಿ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದ. ಜೊತೆಗೆ 2015ರಲ್ಲಿ ನಡೆದ ಮಾರುತಿ ಹತ್ಯೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ಎನ್ನಲಾಗಿದೆ. ಈತನ ವಿರುದ್ಧ ಹಲವು ಪ್ರಕರಣಗಳೂ ದಾಖಲಾಗಿದ್ದವು ಎನ್ನಲಾಗಿದೆ.
2015ರಲ್ಲಿ ನಡೆದ ಮಾರುತಿ ಹತ್ಯೆಯ ಹಳೆಯ ದ್ವೇಷವೇ ದಾದಾಪೀರ್ ಹತ್ಯೆಗೆ ಕಾರಣ ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎನ್ನಲಾಗಿದೆ. ಮಾರುತಿ ತಾಯಿಯೇ ಹತ್ಯೆ ಸಂಚಿನ ಪ್ರಮುಖ ಆರೋಪಿಯಾಗಿದ್ದು, ಮಕ್ಕಳನ್ನು ಪ್ರಚೋದಿಸಿ ಹತ್ಯೆ ಮಾಡಿಸಿರುವ ಆರೋಪ ಕೇಳಿಬಂದಿದೆ.
ಇನ್ನು ಹತ್ಯೆ ನಡೆಸಿದ ಬಳಿಕ ಆರೋಪಿಗಳು ಧರ್ಮಸ್ಥಳಕ್ಕೆ ತೆರಳಿ ಮುಡಿಕೊಟ್ಟಿದ್ದರು ಎನ್ನಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು ಆರು ಜನರನ್ನು ಬಂಧಿಸಿರುವ ಪೊಲೀಸರು, ಹತ್ಯೆಯ ಸಂಪೂರ್ಣ ಹಿನ್ನೆಲೆಯ ಬಗ್ಗೆ ತನಿಖೆ ಮುಂದುವರಿಸಿದ್ದಾರೆ.
ಒಟ್ಟಿನಲ್ಲಿ ಹುಬ್ಬಳ್ಳಿಯಲ್ಲಿ ಹಾಡಹಗಲೇ ನಡೆದ ದಾದಾಪೀರ್ ಹತ್ಯೆ ಪ್ರಕರಣಕ್ಕೆ ಹಳೆಯ ದ್ವೇಷದ ಟ್ವಿಸ್ಟ್ ಸಿಕ್ಕಿದೆ. ಆರು ಜನರ ಬಂಧನದೊಂದಿಗೆ ಪ್ರಕರಣದ ಸಂಚಿನ ಹಲವು ಅಂಶಗಳು ಹೊರಬಂದಿದ್ದು, ಮುಂದಿನ ತನಿಖೆಯಲ್ಲಿ ಮತ್ತಷ್ಟು ಸತ್ಯಗಳು ಬಯಲಾಗಬೇಕಿದೆ.
ಕ್ಯಾಮೆರಾ ಪರ್ಸನ ಹೇಮಂತ್ ಜೊತೆ ಸಂಗಮೇಶ್ ಸತ್ತಿಗೇರಿ, ಕರ್ನಾಟಕ ಟಿವಿ, ಹುಬ್ಬಳ್ಳಿ




