ಡಿಕೆಶಿ ಬಾಯಲ್ಲಿ ‘ದುಡ್ಡಿನ’ ಮಾತು – ರ*ಕ್ತದಂತೆ ಚಲಿಸಬೇಕಂತೆ…ಇಲ್ಲಾಂದ್ರೆ?

ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸಿಎಂ ಡಿ.ಕೆ. ಶಿವಕುಮಾರ್ ಅವರು ಆಡಿದ ಮಾತುಗಳು ಈಗ ರಾಜಕೀಯ ಹಾಗೂ ಆರ್ಥಿಕ ವಲಯದಲ್ಲಿ ಹೊಸ ಚರ್ಚೆಗೆ ಗ್ರಾಸವಾಗಿವೆ. ಹಣ ಒಂದೇ ಕಡೆ ನಿಂತರೆ ಟ್ಯಾಕ್ಸ್ ಆಫೀಸರ್ಸ್‌ ಬರ್ತಾರೆ, ರಕ್ತ ಹೇಗೆ ಚಲಿಸುತ್ತಿರಬೇಕೋ ಹಾಗೆ ದುಡ್ಡು ಕೂಡ ಸಮಾಜದಲ್ಲಿ ನಿರಂತರವಾಗಿ ಚಲಿಸುತ್ತಿರಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಕಾರ್ಯಕ್ರಮದಲ್ಲಿ ತಮ್ಮ ಭಾಷಣದ ವೇಳೆ ಮಾತನಾಡಿದ ಅವರು, ರಾಮಾಯಣ ಹಾಗೂ ಮಹಾಭಾರತದ ಬಗ್ಗೆ ತಾವು ಇತ್ತೀಚಿನ ದಿನಗಳಲ್ಲಿ ಅಧ್ಯಯನ ಮಾಡುತ್ತಿರುವುದಾಗಿ ತಿಳಿಸಿದರು. ರಾಜೀವ್ ಗಾಂಧಿ ಕಾಲದಲ್ಲಿ ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ರಾಮಾಯಣ ಧಾರಾವಾಹಿಯನ್ನು ನೆನಪಿಸಿಕೊಂಡ ಡಿ.ಕೆ. ಶಿವ ಕುಮಾರ್, ಸೀತಾ ಮಾತೆಯ ತ್ಯಾಗ, ಬದುಕು ಮತ್ತು ಸಮಾಜವನ್ನು ಅವರು ಎದುರಿಸಿದ ರೀತಿ ನಿಜಕ್ಕೂ ಮಹೋನ್ನತವಾದುದು ಎಂದರು. ಇನ್ನು ಭಾರತೀಯ ಸಂಸ್ಕೃತಿಯಲ್ಲಿ ಗೌರಿ ಹಬ್ಬದ ನಂತರವೇ ಗಣೇಶ ಹಬ್ಬ ಬರುವುದನ್ನು ಉಲ್ಲೇಖಿಸುತ್ತಾ, ನಮ್ಮ ದೇಶದ ಇತಿಹಾಸ ಹಾಗೂ ಮಹಿಳೆಯರ ಸ್ಥಾನಮಾನದ ಬಗ್ಗೆ ಮಾತನಾಡಿದರು.

ದೇಶದ ಯುವಕರ ಮತ್ತು ಮಹಿಳೆಯರ ಮೇಲೆ ತಮಗೆ ಅಪಾರ ನಂಬಿಕೆಯಿದೆ ಎಂದ ಡಿ.ಕೆ. ಶಿವಕುಮಾರ್, ಮಹಿಳೆಯರಿಗೆ ಆರ್ಥಿಕ ಬಲ ತುಂಬಲು ತಮ್ಮ ಸರಕಾರ ಪಂಚ ಗ್ಯಾರಂಟಿಗಳನ್ನು ಜಾರಿಗೆ ತಂದಿರುವುದಾಗಿ ತಿಳಿಸಿದರು. ‘ಶಕ್ತಿ’ ಯೋಜನೆಯ ಮೂಲಕ ರಾಜ್ಯದ ಹೆಣ್ಣುಮಕ್ಕಳು ಯಾವುದೇ ಹಣವಿಲ್ಲದೆ ಉಚಿತವಾಗಿ ಪ್ರಯಾಣಿಸುತ್ತಿದ್ದು, ದೇವಸ್ಥಾನಗಳು ಹಾಗೂ ಬಂಧುಗಳ ಮನೆಗಳಿಗೆ ತೆರಳುತ್ತಿದ್ದಾರೆ ಎಂದು ಹಾಸ್ಯಮಿಶ್ರಿತ ಧ್ವನಿಯಲ್ಲಿ ಹೇಳಿದರು.

ಇನ್ನು ‘ಗೃಹಲಕ್ಷ್ಮಿ’ ಯೋಜನೆಯ ಬಗ್ಗೆ ಮಾತನಾಡುತ್ತಾ, ಪ್ರಧಾನಿ ಸೇರಿದಂತೆ ವಿರೋಧ ಪಕ್ಷದ ನಾಯಕರು ರಾಜ್ಯ ದಿವಾಳಿಯಾಗುತ್ತದೆ ಎಂದು ಆರೋಪಿಸಿದ್ದರು. ಆದ್ರೆ ಇಂದು ರಾಜ್ಯದ 1 ಕೋಟಿ 21 ಲಕ್ಷಕ್ಕೂ ಅಧಿಕ ಕುಟುಂಬಗಳ ಯಜಮಾನಿಯರ ಖಾತೆಗೆ ಪ್ರತಿ ತಿಂಗಳು ನೇರವಾಗಿ 2 ಸಾವಿರ ರೂಪಾಯಿ ಜಮೆಯಾಗುತ್ತಿದ್ದು, ಇದರಿಂದ ಆರ್ಥಿಕ ವಹಿವಾಟು ಹೇಗೆ ಚುರುಕಾಗಿದೆ ಎಂಬುದನ್ನ ವಿವರಿಸಿದರು.

ಹಣ ಎನ್ನುವುದು ಒಂದೇ ಕಡೆ ಸಂಗ್ರಹವಾಗಿರಬಾರದು, ಅದು ರಕ್ತ ಪರಿಚಲನೆಯಂತೆ ಸಮಾಜದಲ್ಲಿ ನಿರಂತರವಾಗಿ ಚಲನಶೀಲವಾಗಿರಬೇಕು ಎಂದು ಪ್ರತಿಪಾದಿಸಿದ ಡಿ.ಕೆ. ಶಿವಕುಮಾರ್, ಹಣದ ಚಲಾವಣೆ ಹೆಚ್ಚಾದಾಗ ಮಾತ್ರ ಆರ್ಥಿಕ ವ್ಯವಸ್ಥೆ ಸದೃಢವಾಗುತ್ತದೆ ಎಂಬುದನ್ನು ತಮ್ಮದೇ ಶೈಲಿಯಲ್ಲಿ ವಿವರಿಸಿದ್ದಾರೆ.

About The Author