Haveri: ಅನುಮೋದನೆಯಾಗಿರುವ ಶಾಲೆ ಆರಂಭಿಸುವಂತೆ ಆಗ್ರಹಿಸಿ ಗ್ರಾಮಸ್ಥರಿಂದ ಪ್ರತಿಭಟನೆ

Haveri News: ಹಾವೇರಿ: ಕೆಪಿಎಸ್ ಶಾಲೆಗಾಗಿ ಹಳ್ಳೂರು ಗ್ರಾಮಸ್ಥರು ಧರಣಿ ನಡೆಸಿದ್ದಾರೆ. ಗ್ರಾಮದಲ್ಲಿ ಹಾದು ಹೋಗಿರುವ ರಾಣಿಬೇನ್ನೂರು – ಶಿವಮೊಗ್ಗ ರಾಜ್ಯ ಹೆದ್ದಾರಿಯಲ್ಲಿ ಗ್ರಾಮಸ್ಥರು ಧರಣಿ ನಡೆಸಿದ್ದು, ಗ್ರಾಮದಲ್ಲಿ ಕೆಪಿಎಸ್ ಶಾಲೆಯನ್ನು ಆರಂಭಿಸುವಂತೆ ಆಗ್ರಹಿಸಿದ್ದಾರೆ.

ಈ ಗ್ರಾಮದಲ್ಲಿ ಕೆಪಿಎಸ್ ಶಾಲೆ ಅನುಮೋದನೆಯಾಗಿದೆ. ಆದರೆ ಅದನ್ನು ಇನ್ನೂ ಆರಂಭ ಮಾಡಿಲ್ಲ ಅನ್ನೋದೇ ಈ ಗ್ರಾಮಸ್ಥರಿಗೆ ಬೇಸರ. ಸ್ಥಳೀಯ ಪ್ರಭಾವದಿಂದಾಗಿ ಹಳ್ಳೂರು ವ್ಯಾಪ್ತಿಗೆ ಮಂಜೂರು ಆಗಿರುವ ಶಾಲೆಯನ್ನು ಕಮಲಾಪುರಕ್ಕೆ ಸ್ಥಳಾಂತರಿಸಲಾಗಿದೆ ಎಂದು ಕೂಡ ಇಲ್ಲಿನ ಗ್ರಾಮಸ್ಥರು ಆರೋಪಿಸಿದ್ದಾರೆ.

ಹಳ್ಳೂರು ಗ್ರಾಮ ಪಂಚಾಯತಿ ವ್ಯಾಪ್ತಿಗೆ 5 ಗ್ರಾಮಗಳು ಬರುತ್ತೆ. ಅವುಗಳಲ್ಲಿ ಹಳ್ಳೂರು ಗ್ರಾಮದಲ್ಲಿ ಶಾಲೆಗೆ ಅಗತ್ಯವಾಗಿರುವ ಜಮೀನು,ಆಸ್ಪತ್ರೆ, ವಸತಿ ನಿಲಯದ ಸೌಲಭ್ಯ ಇದೆ. ಈ ಎಲ್ಲಾ ಮಾನದಂಡಗಳು ಹಾಗೂ ಸೌಕರ್ಯ ಹೊಂದಿದ್ದರು ಗ್ರಾಮಕ್ಕೆ ಅನ್ಯಾಯವಾಗುತ್ತಿದೆ. ಹಾಗಾಗಿ ಪಂಚಾಯಿತಿ ವ್ಯಾಪ್ತಿಯ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಹಳ್ಳೂರಿನಲ್ಲಿ ಶಾಲೆ ಆರಂಭಿಸುವಂತೆ ಪಟ್ಟು ಹಿಡಿದಿದ್ದಾರೆ.

ಇನ್ನು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಡಿಡಿಪಿಐ ಮೋಹನ್ ದಂಡಿನ್, ಪ್ರತಿಭಟನೆ ಕೈ ಬಿಡುವಂತೆ ಮನವಿ ಮಾಡಿದ್ದಾರೆ. ಆದರೆ ಶಾಲೆ ಆರಂಭದ ಬಗ್ಗೆ ಸ್ಪಷ್ಟ ಆದೇಶ ಬರುವವರೆಗೂ ಧರಣಿ ಕೈ ಬಿಡುವುದಿಲ್ಲವೆಂದು ಗ್ರಾಮಸ್ಥರು ಹೇಳಿದ್ದಾರೆ.

ಅಲ್ಲದೇ, ಎರಡು ದಿನಗಳಲ್ಲಿ ಈ ಬಗ್ಗೆ ಶಿಕ್ಷಣ ಇಲಾಖೆಯಿಂದ ಆದೇಶ ನೀಡುವಂತೆ ಹಕ್ಕೋತ್ತಾಯ ಮಾಡಲಾಗಿದೆ. ಎರಡು ದಿನಗಳಲ್ಲಿ ಆದೇಶ ಬರದಿದ್ದರೆ ರಾಣಿಬೇನ್ನೂರು – ಶಿವಮೊಗ್ಗ ರಸ್ತೆ ಬಂದ್ ಮಾಡುವ ಎಚ್ಚರಿಕೆ ನೀಡಲಾಗಿದೆ.  ಇದಕ್ಕೂ ಜಗ್ಗದಿದ್ದರೆ ಮಕ್ಕಳೊಂದಿಗೆ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕುವ ತೀರ್ಮಾನ ಮಾಡುತ್ತೇವೆ ಎಂದು ಗ್ರಾಮಸ್ಥರು ಹೇಳಿದ್ದಾರೆ.  ಧರಣಿ ಸ್ಥಳದಲ್ಲಿ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

About The Author