Koppala News: ಹಿಂದೂ ಸೇವಾ ಪ್ರತಿಷ್ಠಾನದ ವತಿಯಿಂದ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಕೊಪ್ಪಳ ನಗರದಲ್ಲಿ ಅದ್ಧೂರಿ ಶೋಭಾಯಾತ್ರೆ ನಡೆಯಿತು.
ನಗರದ ಅಶೋಕ ವೃತ್ತದಿಂದ ಆರಂಭಗೊಂಡ ಶೋಭಾಯಾತ್ರೆಯು ಜವಾಹರ್ ರಸ್ತೆಯ ಮೂಲಕ ಸಾಗಿತು. ಯಲಬುರ್ಗಾ ಹಾಗೂ ಕೊಪ್ಪಳ ತಾಲೂಕಿನ ಸುಮಾರು 70 ಗ್ರಾಮಗಳಿಂದ ಆಗಮಿಸಿದ್ದ 1,000ಕ್ಕೂ ಹೆಚ್ಚು ಮಕ್ಕಳು ರಾಧಾ-ಕೃಷ್ಣರ ವೇಷ ಧರಿಸಿ ಶೋಭಾಯಾತ್ರೆಯಲ್ಲಿ ಪಾಲ್ಗೊಂಡು ಗಮನ ಸೆಳೆದರು.
ಶೋಭಾಯಾತ್ರೆಗೆ ಹಿಂದೂ ಪರ ಸಂಘಟನೆಗಳ ಪ್ರಮುಖರು ಚಾಲನೆ ನೀಡಿದರು.ಜವಾಹರ್ ರಸ್ತೆಯಲ್ಲಿ ಬಂಡಿ ದುರ್ಗಮ್ಮ ದೇವಸ್ಥಾನದ ವತಿಯಿಂದ ಶೋಭಾಯಾತ್ರೆಯಲ್ಲಿ ಪಾಲ್ಗೊಂಡಿದ್ದ ಮಕ್ಕಳಿಗೆ ಬಿಸ್ಕತ್, ಚಾಕೋಲೇಟ್ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು.
ಜನ್ಮಾಷ್ಟಮಿ ಅಂಗವಾಗಿ ಜವಾಹರ್ ರಸ್ತೆ ಹಾಗೂ ಗಡಿಯಾರ ಕಂಬದ ಸಮೀಪ ಮಡಿಕೆ ಒಡೆಯುವ ಕಾರ್ಯಕ್ರಮ ನಡೆಯಿತು. ಮಕ್ಕಳು ಕೋಲಾಟ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಿ ಸಂಭ್ರಮಿಸಿದರು.
ನಂತರ ರಾಮದೇವ ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಮಕೃಷ್ಣ ಆಶ್ರಮದ ಶ್ರೀ ಚೈತನ್ಯಾನಂದ ಮಹಾಸ್ವಾಮಿಗಳು ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಕೃಷ್ಣ ಜನ್ಮಾಷ್ಟಮಿಯನ್ನು ಏಕೆ ಆಚರಿಸುತ್ತೇವೆ ಎಂಬುದರ ಮಹತ್ವವನ್ನು ಮಕ್ಕಳಿಗೆ ತಿಳಿಸುವುದು ಅಗತ್ಯ, ಎಂದರು. ಈ ಸಂದರ್ಭದಲ್ಲಿ ಬಳ್ಳಾರಿ ವಿಭಾಗದ ಸಂಚಾಲಕರಾದ ಶ್ರೀ ಭೀಮರಾವ್ ದೇಶಪಾಂಡೆ ಅವರು ಪ್ರಾಸ್ತಾವಿಕ ಭಾಷಣ ಮಾಡಿದರು.
ಹಿಂದೂ ಸೇವಾ ಪ್ರತಿಷ್ಠಾನದ ನಿರ್ದೇಶಕರಾದ ಮಹೇಶ್ ವೈದ್ಯ ಅವರು ಮಕ್ಕಳೊಂದಿಗೆ ಹಾಡು ಹಾಡಿ ಸಂಭ್ರಮಿಸಿದರು. ಅಮಿತ್ ಕಂಪ್ಲೀಕರ ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಅಮಿತ್ ಕಂಪ್ಲೀಕರ ನೆರವೇರಿಸಿದರು. ಸೋಮನಗೌಡ ಹೊಗರನಾಳ ವಂದನಾರ್ಪಣೆ ಸಲ್ಲಿಸಿದರು.
ಹಿಂದೂ ಸೇವಾ ಪ್ರತಿಷ್ಠಾನದ ಯಲಬುರ್ಗಾ ಹಾಗೂ ಕೊಪ್ಪಳ ತಾಲೂಕುಗಳ ಮನೆಪಾಠ ಮಾತಾಜಿಯರು, ಸಂಚಾಲಕರು ಮತ್ತು ಪೂರ್ಣಾವಧಿ ಕಾರ್ಯಕರ್ತರು ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.




