ರೇಷನ್ ಕಾರ್ಡ್‌ದಾರರಿಗೆ ಆಹಾರ ಇಲಾಖೆಯ ಮಹತ್ವದ ಎಚ್ಚರಿಕೆ!

ನಿಮ್ಮ ಬಳಿ ರೇಷನ್ ಕಾರ್ಡ್ ಇದ್ದರೆ ಈ ಸುದ್ದಿ ನಿಮಗೆ ಅತ್ಯಂತ ಮುಖ್ಯವಾದದ್ದು. ಹೌದು, ಪಡಿತರ ಚೀಟಿದಾರರು ಸೆಪ್ಟೆಂಬರ್ 30ರೊಳಗೆ ಕಡ್ಡಾಯವಾಗಿ ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸುವಂತೆ ಆಹಾರ ಇಲಾಖೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಇದರ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ ನೋಡಿ.

ಎಸ್ ‘ಕರ್ನಾಟಕದಲ್ಲಿ ನಕಲಿ ಹಾಗೂ ಅನರ್ಹ ಪಡಿತರ ಚೀಟಿಗಳಿಗೆ ಕಡಿವಾಣ ಹಾಕಿ, ನಿಜವಾದ ಅರ್ಹ ಫಲಾನುಭವಿಗಳಿಗೆ ನ್ಯಾಯಯುತವಾಗಿ ಸೌಲಭ್ಯ ತಲುಪಿಸುವ ನಿಟ್ಟಿನಲ್ಲಿ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಈ ಮಹತ್ವದ ಹೆಜ್ಜೆ ಇಟ್ಟಿದೆ ಎನ್ನಲಾಗ್ತಿದೆ. ಸರ್ವರ್ ಸಮಸ್ಯೆಯಿಂದಾಗಿ ಆಗಸ್ಟ್ ಮಧ್ಯಭಾಗದಲ್ಲಿ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದ ಈ ಇ-ಕೆವೈಸಿ ಪ್ರಕ್ರಿಯೆ, ಈಗ ರಾಜ್ಯದ ಎಲ್ಲಾ ನ್ಯಾಯಬೆಲೆ ಅಂಗಡಿಗಳಲ್ಲಿ ಮರುಪ್ರಾರಂಭಗೊಂಡಿದೆ.

ಪಡಿತರ ಚೀಟಿಯಲ್ಲಿ ಹೆಸರಿರುವ ಕುಟುಂಬದ ಪ್ರತಿಯೊಬ್ಬ ಸದಸ್ಯರೂ ತಮ್ಮ ಇ-ಕೆವೈಸಿ ಮಾಡಿಸುವುದು ಕಡ್ಡಾಯವಾಗಿದೆ. ಫಲಾನುಭವಿಗಳು ತಮ್ಮ ರೇಷನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ದಾಖಲೆಗಳೊಂದಿಗೆ ಹತ್ತಿರದ ನ್ಯಾಯಬೆಲೆ ಅಂಗಡಿಗೆ ತೆರಳಿ, ಬಯೋಮೆಟ್ರಿಕ್ ಅಂದ್ರೆ ಬೆರಳಚ್ಚು ನೀಡುವುದರ ಮೂಲಕ ಈ ಪ್ರಕ್ರಿಯೆಯನ್ನು ಕೇವಲ ಕೆಲವೇ ನಿಮಿಷಗಳಲ್ಲಿ ಪೂರ್ಣಗೊಳಿಸಬಹುದಾಗಿದೆ. ಆಧಾರ್ ಮಾಹಿತಿಯನ್ನು ತಾಳೆ ನೋಡುವುದು, ಮೃತಪಟ್ಟವರ ಹಾಗೂ ಸ್ಥಳಾಂತರಗೊಂಡವರ ಹೆಸರುಗಳನ್ನು ತೆಗೆದುಹಾಕಿ ಪಟ್ಟಿಯನ್ನು ಪರಿಷ್ಕರಿಸುವುದೇ ಈ ಅಭಿಯಾನದ ಮುಖ್ಯ ಉದ್ದೇಶ ಅಂತ ಹೇಳಲಾಗ್ತಿದೆ .

ಒಂದು ವೇಳೆ ಬಯೋಮೆಟ್ರಿಕ್ ಅಥವಾ ಬೆರಳಚ್ಚು ಸ್ಕ್ಯಾನ್ ಆಗದಿದ್ದರೆ, ಸಾರ್ವಜನಿಕರು ತಕ್ಷಣವೇ ಸಮೀಪದ ಆಧಾರ್ ಕೇಂದ್ರಕ್ಕೆ ಭೇಟಿ ನೀಡಿ ಬಯೋಮೆಟ್ರಿಕ್ ಅಪ್‌ಡೇಟ್ ಮಾಡಿಸಿಕೊಳ್ಳಬೇಕು. ಆಧಾರ್ ನವೀಕರಣಗೊಂಡ ಹದಿನೈದು ದಿನಗಳ ಬಳಿಕ ಮತ್ತೆ ನ್ಯಾಯಬೆಲೆ ಅಂಗಡಿಗೆ ಹೋಗಿ ಇ-ಕೆವೈಸಿ ಮುಗಿಸಬಹುದು.

ಇನ್ನು ಇದರ ಜೊತೆಗೆ ‘ಇಲಾಖೆಯು ಸಾರ್ವಜನಿಕರಿಗೆ ಪ್ರಮುಖ ಎಚ್ಚರಿಕೆಯೊಂದನ್ನು ನೀಡಿದೆ. ಇ-ಕೆವೈಸಿ ಮಾಡಿಕೊಡುವುದಾಗಿ ಯಾರಾದರೂ ಫೋನ್ ಮಾಡಿ ಒಟಿಪಿ ಕೇಳಿದರೆ ಯಾವುದೇ ಕಾರಣಕ್ಕೂ ನೀಡಬೇಡಿ. ಆಹಾರ ಇಲಾಖೆಯ ಯಾವುದೇ ಅಧಿಕಾರಿಗಳು ಅಥವಾ ಸಿಬ್ಬಂದಿ ಒಟಿಪಿ ಕೇಳುವುದಿಲ್ಲವಾದ್ದರಿಂದ ಸೈಬರ್ ವಂಚಕರ ಬಗ್ಗೆ ಜಾಗರೂಕರಾಗಿರಿ. ಹಾಗಾಗಿ ಬರುವ ಸೆಪ್ಟೆಂಬರ್ 30ರ ಗಡುವಿನೊಳಗೆ ತಪ್ಪದೇ ನಿಮ್ಮ ಹತ್ತಿರದ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿ ಇ-ಕೆವೈಸಿ ಪೂರ್ಣಗೊಳಿಸಿಕೊಳ್ಳಿ..

About The Author