Political News: ಡಿ.ಕೆ.ಶಿವಕುಮಾರ್ ಸಿಎಂ ಆಗಿ ನಿನ್ನೆಗೆ 100 ದಿನಗಳು ಪೂರೈಸಿದೆ. ಹೀಗಾಗಿ ಬೆಂಗಳೂರಿನ ಬ್ಯಾಂಕೇಟ್ ಹಾಲ್ನಲ್ಲಿ ಕಾರ್ಯಕ್ರಮ ಮಾಡಲಾಾಯಿತು. ಇದೇ ವೇಳೆ ಹಲವು ಯೋಜನೆಗಳನ್ನು ಘೋಷಣೆ ಮಾಡಲಾಗಿದೆ.
ಈ ವೇಳೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿರುವ ಸಿಎಂ ಡಿ.ಕೆ.ಶಿವಕುಮಾರ್, 2037ರ ವೇಳೆಗೆ ಕರ್ನಾಟಕವನ್ನು 1 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನಾಗಿ ರೂಪಿಸುವುದು, ಬಡತನ ಮತ್ತು ಶಾಲೆಯಿಂದ ಹೊರಗುಳಿಯುವ ಪ್ರಮಾಣವನ್ನು ಶೂನ್ಯಕ್ಕೆ ಇಳಿಸುವುದು ಹಾಗೂ ಅಪೌಷ್ಟಿಕತೆಯನ್ನು 5% ಕ್ಕಿಂತ ಕಡಿಮೆ ಮಾಡುವುದು ಸರ್ಕಾರದ ಪ್ರಮುಖ ‘ಮಹಾಸಂಕಲ್ಪ’ವಾಗಿದೆ ಎಂದಿದ್ದಾರೆ.
ಇದಕ್ಕಾಗಿ ‘ನವಸಂಕಲ್ಪ’ದಡಿ ಆರೋಗ್ಯ, ಶಿಕ್ಷಣ ಹಾಗೂ ಮೇಕೆದಾಟು-ಎತ್ತಿನಹೊಳೆಯಂತಹ ಜಲ ಭದ್ರತಾ ಯೋಜನೆಗಳಿಗೆ ವೇಗ ನೀಡಲಾಗಿದೆ. ಮುಂಬರುವ 500 ದಿನಗಳಲ್ಲಿ ಮೂಲಸೌಕರ್ಯಕ್ಕಾಗಿ ₹1.5 ಲಕ್ಷ ಕೋಟಿ ಬಂಡವಾಳ ಹೂಡಿಕೆ ಹಾಗೂ ₹3 ಲಕ್ಷ ಕೋಟಿ ಹೊಸ ಹೂಡಿಕೆ ಆಕರ್ಷಿಸುವ ಗುರಿ ಹೊಂದಲಾಗಿದೆ.
ಜೊತೆಗೆ, 5 ಹೊಸ ಮಹಾನಗರಗಳ ನಿರ್ಮಾಣ, 1 ಲಕ್ಷ ಸರ್ಕಾರಿ ಹಾಗೂ 5 ಲಕ್ಷ ಖಾಸಗಿ ಉದ್ಯೋಗ ಸೃಷ್ಟಿ, ನಿರಾಶ್ರಿತರಿಗೆ 5 ಲಕ್ಷ ನಿವೇಶನ ಹಂಚಿಕೆ ಮತ್ತು ಬೆಂಗಳೂರಿನಲ್ಲಿ 5 ಹೊಸ ಲಾಲ್ಬಾಗ್ ಮಾದರಿಯ ಉದ್ಯಾನವನಗಳು ಹಾಗೂ 7 ಕೆರೆಗಳ ಪುನರುಜ್ಜೀವನಕ್ಕೆ ದೃಢ ಹೆಜ್ಜೆ ಇಡಲಾಗಿದೆ.
ಆರ್ಥಿಕವಾಗಿ ಸಬಲ, ಸಾಮಾಜಿಕವಾಗಿ ಸಮಾನ ಹಾಗೂ ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿರುವ ನಾಳಿನ ಭಾರತಕ್ಕೆ ಕರ್ನಾಟಕವನ್ನು ಮಾದರಿಯಾಗಿಸುವತ್ತ ಇದು ದಿಟ್ಟ ಹೆಜ್ಜೆಯಾಗಿದೆ ಎಂದು ಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.




