ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ, ಮಾಜಿ ಸಚಿವ ಕೆ.ಎನ್. ರಾಜಣ್ಣ ಅವರಿಗೆ ಮತ್ತೊಮ್ಮೆ ಮುಖಭಂಗವಾಗಿದೆ. ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಸ್ಥಾನ ಸಿಗದಿರುವುದಕ್ಕೆ ಅವರ ಪುತ್ರ ಹಾಗೂ ಎಂಎಲ್ಸಿ ಆರ್. ರಾಜೇಂದ್ರ ಈಗ ನೇರವಾಗಿ ಕಾಂಗ್ರೆಸ್ ಪಕ್ಷದ ನಾಯಕರ ವಿರುದ್ಧವೇ ತಿರುಗಿ ಬಿದ್ದಿದ್ದಾರೆ. ತಂದೆಗೆ ವಂಚನೆ ಮಾಡಲಾಗಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಹೌದು ‘ಸಿದ್ದರಾಮಯ್ಯ ಅವರು ತಂದೆಗೆ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಹುದ್ದೆ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ, ಪಕ್ಷದ ಒಳಗಿನ ಕೆಲವು ಶಕ್ತಿಗಳು ವ್ಯವಸ್ಥಿತವಾಗಿ ಸಂಚು ನಡೆಸಿ ಆ ಸ್ಥಾನ ತಪ್ಪಿಸಿವೆ ಅಂತ ರಾಜೇಂದ್ರ ಆರೋಪಿಸಿದ್ದಾರೆ. ತಂದೆಯ ರಾಜಕೀಯ ಬೆಳವಣಿಗೆಯನ್ನು ಸಹಿಸದ ಕೆಲವು ಆಂತರಿಕ ಶಕ್ತಿಗಳು ‘ಒಳಕೈ ರಾಜಕೀಯ’ ನಡೆಸಿ, ಡಿ.ಕೆ. ಶಿವಕುಮಾರ್ ಬಣದ ಅಭ್ಯರ್ಥಿಗೆ ಹುದ್ದೆ ಸಿಗುವಂತೆ ಮಾಡಿವೆ ಎಂದು ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪಕ್ಷದಲ್ಲಿ ಹಿರಿಯ ನಾಯಕರನ್ನು ಕೀಳಾಗಿ ಕಾಣಲಾಗುತ್ತಿದೆ ಮತ್ತು ಕಡೆಗಣಿಸಲಾಗುತ್ತಿದೆ ಎಂ ರಾಜೇಂದ್ರ, ಹಿರಿಯರ ಜತೆಗೆ ಹೀಗೆ ನಡೆದುಕೊಳ್ಳುತ್ತಿರುವುದು ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಭಾರೀ ಹಿನ್ನಡೆ ತರಲಿದೆ ಎಂದು ನೇರ ಎಚ್ಚರಿಕೆಯನ್ನೂ ನೀಡಿದ್ದಾರೆ. ಇನ್ನು ನಾಗೇಂದ್ರ ಅವರ ತೆರವಾದ ಸಚಿವ ಸ್ಥಾನವನ್ನು ಪರಿಶಿಷ್ಟ ಪಂಗಡದ ಬೇರೆ ಯಾವುದೇ ಸಮರ್ಥ ನಾಯಕರಿಗೆ ನೀಡಲಿ ಎಂದು ಅವರು ಒತ್ತಾಯಿಸಿದ್ದಾರೆ.
ಇದೇ ವೇಳೆ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಭೇಟಿಯ ಬಗ್ಗೆಯೂ ರಾಜೇಂದ್ರ ಸ್ಪಷ್ಟನೆ ನೀಡಿದ್ದಾರೆ. ಆ ಭೇಟಿ ಕೇವಲ ಸೌಹಾರ್ದಯುತವಾಗಷ್ಟೇ ಇತ್ತು, ಅದಕ್ಕೆ ಯಾರೂ ರಾಜಕೀಯ ಬಣ್ಣ ಬಳಿಯಬೇಡಿ ಎಂದು ಮನವಿ ಮಾಡಿದ್ದಾರೆ. ಒಟ್ಟಿನಲ್ಲಿ, ಅಪೆಕ್ಸ್ ಬ್ಯಾಂಕ್ ಗಿರಿಗೆ ಕನ್ನಡಿ ಬಿದ್ದ ವಿಚಾರ ಈಗ ಕಾಂಗ್ರೆಸ್ ಪಾಳಯದಲ್ಲಿ ಹೊಸ ತಳಮಳಕ್ಕೆ ಕಾರಣವಾಗಿದ್ದು, ರಾಜಣ್ಣ ಬಣ ಮುಂದಿನ ದಿನಗಳಲ್ಲಿ ಯಾವ ಹೆಜ್ಜೆ ಇಡಲಿದೆ ಎಂಬುದು ಕುತೂಹಲ ಮೂಡಿಸಿದೆ.




