Mandya News: ಮಂಡ್ಯ, ಸೆ.16: ರಾಜಧನದ ಇಮ್ಮಡಿ ವಸೂಲಿ ವಿರೋಧಿಸಿ ಯೂನಿಯನ್ ಆಫ್ ಕರ್ನಾಟಕ ಕ್ವಾರಿ ಮತ್ತು ಸ್ಟೋನ್ ಕ್ರಷರ್ ಓನರ್ಸ್ ಅಸೋಸಿಯೇಷನ್ ಸೆ.18 ರಿಂದ ರಾಜ್ಯಾದ್ಯಂತ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದೆ.
ಈ ಕುರಿತು ಸಂಘಟನೆಯ ಅಧ್ಯಕ್ಷರು ಪ್ರಕಟಣೆ ನೀಡಿದ್ದು, ಸೆ.18 ರಿಂದ ರಾಜ್ಯದ ಎಲ್ಲಾ ಕ್ವಾರಿ ಮತ್ತು ಕ್ರಷರ್ ಘಟಕಗಳ ಉತ್ಪಾದನೆ, ಜಲ್ಲಿ, ಎಂ-ಸ್ಯಾಂಡ್ ಮತ್ತು ಕಲ್ಲು ಉತ್ಪನ್ನಗಳ ಲೋಡಿಂಗ್ ಮತ್ತು ಸಾಗಾಣಿಕೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗುವುದು ಎಂದು ತಿಳಿಸಿದ್ದಾರೆ. ಸರ್ಕಾರದೊಂದಿಗೆ ಮಾತುಕತೆ ನಡೆದು ಬೇಡಿಕೆ ಈಡೇರುವವರೆಗೂ ಮುಷ್ಕರ ಮುಂದುವರಿಯಲಿದೆ ಎಂದು ಎಚ್ಚರಿಸಿದ್ದಾರೆ.
ಪ್ರಮುಖ ಬೇಡಿಕೆ ಏನು?
ಒಂದೇ ವಸ್ತುವಿಗೆ ಎರಡು ಬಾರಿ ರಾಜಧನ ವಸೂಲಿ ಮಾಡುವುದನ್ನು ಕೈಬಿಡಬೇಕು ಎಂಬುದು ಮಾಲೀಕರ ಪ್ರಮುಖ ಆಗ್ರಹವಾಗಿದೆ.
ರಾಜ್ಯ ಸರ್ಕಾರವು ಲೋಕೋಪಯೋಗಿ, ಜಲಸಂಪನ್ಮೂಲ ಸೇರಿದಂತೆ ಇತರೆ ಸರ್ಕಾರಿ ಇಲಾಖೆಗಳ ಮೂಲಕವೇ ರಾಜಧನ ಕಡಿತ ಮಾಡಿಕೊಳ್ಳುತ್ತಿದೆ. ಅದೇ ವೇಳೆ ಕ್ವಾರಿ ಮತ್ತು ಕ್ರಷರ್ ಮಾಲೀಕರಿಂದಲೂ ಪ್ರತ್ಯೇಕವಾಗಿ ರಾಜಧನ ಸಂಗ್ರಹಿಸುತ್ತಿದೆ. ಇದು ಕಾನೂನುಬಾಹಿರ ಮತ್ತು ಅವೈಜ್ಞಾನಿಕ ಇಮ್ಮಡಿ ರಾಜಧನ (Dual Royalty Collection) ಪದ್ಧತಿಯಾಗಿದೆ ಎಂದು ಸಂಘಟನೆ ಆರೋಪಿಸಿದೆ.
ಸರ್ಕಾರವು ಗಣಿ ಮಾಲೀಕರಿಂದಾಗಲಿ ಅಥವಾ ಅಂತಿಮ ಬಳಕೆದಾರರಿಂದಾಗಲಿ ಯಾವುದಾದರೂ ಒಂದೇ ಹಂತದಲ್ಲಿ ಮಾತ್ರ ರಾಜಧನ ಸಂಗ್ರಹಿಸಬೇಕು. ಏಕಮುಖ ರಾಜಧನ (Single Royalty) ಸಂಗ್ರಹ ವ್ಯವಸ್ಥೆ ಜಾರಿಗೆ ತಂದು, ಇಮ್ಮಡಿ ಸಂಗ್ರಹವನ್ನು ತಕ್ಷಣ ರದ್ದುಪಡಿಸಿ ಸ್ಪಷ್ಟ ನಿಯಮ ರೂಪಿಸಬೇಕು ಎಂದು ಒಕ್ಕೂಟ ಆಗ್ರಹಿಸಿದೆ.
ಈ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಕ್ವಾರಿ ಮತ್ತು ಕ್ರಷರ್ ಮಾಲೀಕರು ಸ್ವಯಂಪ್ರೇರಿತವಾಗಿ ಮುಷ್ಕರದಲ್ಲಿ ಭಾಗವಹಿಸಿ ಒಗ್ಗಟ್ಟು ಪ್ರದರ್ಶಿಸಬೇಕು ಎಂದು ಮನವಿ ಮಾಡಲಾಗಿದೆ.
ಮುಷ್ಕರದಿಂದಾಗಿ ರಾಜ್ಯದಲ್ಲಿ ಕಟ್ಟಡ ನಿರ್ಮಾಣ, ರಸ್ತೆ ಮತ್ತು ನೀರಾವರಿ ಕಾಮಗಾರಿಗಳಿಗೆ ಜಲ್ಲಿ ಮತ್ತು ಎಂ-ಸ್ಯಾಂಡ್ ಪೂರೈಕೆಯಲ್ಲಿ ಭಾರೀ ವ್ಯತ್ಯಯವಾಗುವ ಸಾಧ್ಯತೆ ಇದೆ.




