Koppala News: ಕೊಪ್ಪಳ ತಾಲೂಕನ್ನು ತಕ್ಷಣವೇ ಬರಪೀಡಿತ ಪ್ರದೇಶವೆಂದು ಘೋಷಿಸಬೇಕು ಮತ್ತು ಸಂಕಷ್ಟದಲ್ಲಿರುವ ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿ, ಜೆಡಿಎಸ್ ಜಿಲ್ಲಾ ಘಟಕದ ವತಿಯಿಂದ ‘ನ್ಯಾಯಕ್ಕಾಗಿ ನಡಿಗೆ’ ಬೃಹತ್ ಪಾದಯಾತ್ರೆಗೆ ಚಾಲನೆ ನೀಡಲಾಗಿದೆ
ಕೊಪ್ಪಳ ತಾಲೂಕಿನಲ್ಲಿ ಮಳೆಯಿಲ್ಲದೆ ಬರ ಪರಿಸ್ಥಿತಿ ತೀವ್ರಗೊಂಡಿದೆ. ರೈತರು ಕಷ್ಟದಲ್ಲಿದ್ದರೂ ಜನಪ್ರತಿನಿಧಿಗಳು ಅಥವಾ ಅಧಿಕಾರಿಗಳು ಜಮೀನುಗಳಿಗೆ ಭೇಟಿ ನೀಡಿ ಬೆಳೆ ಹಾನಿ ಪರಿಶೀಲನೆ ನಡೆಸಿಲ್ಲ ಎಂದು ಆರೋಪಿಸಿ ಜೆಡಿಎಸ್ ನಾಯಕರು ಅಳವಂಡಿ ಗ್ರಾಮದಿಂದ ಕೊಪ್ಪಳದವರೆಗೆ ಬೃಹತ್ ಪಾದಯಾತ್ರೆ ಆರಂಭಿಸಿದ್ದಾರೆ.
ಅಳವಂಡಿಯಿಂದ ಆರಂಭವಾದ ಈ ಪಾದಯಾತ್ರೆಯು ಕಂಪ್ಲಿ, ಮೋರನಾಳ, ಬಿಟಗೇರಿ, ಹಿರೇಸಿಂಧೋಗಿ, ಕೊಳೂರು, ಕಾಟರಹಳ್ಳಿ ಹಾಗೂ ದದೇಗಲ್ ಮೂಲಕ ಸಂಚರಿಸಿ ಸೆಪ್ಟೆಂಬರ್ 16ರಂದು ಕೊಪ್ಪಳ ತಲುಪಲಿದ್ದು
ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು
ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ.ವಿ. ಚಂದ್ರಶೇಖರ್ ಹಾಗೂ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ್ ಮಾತನಾಡಿ, ‘ರಾಜ್ಯದಲ್ಲಿ ತೀವ್ರ ಬರಗಾಲದ ಪರಿಸ್ಥಿತಿಯಿದ್ದರೂ ಸರ್ಕಾರ ಕೆಲವೇ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದೆ. ಆದರೆ ಕೊಪ್ಪಳ ತಾಲೂಕನ್ನು ಕೈಬಿಟ್ಟು ತಾರತಮ್ಯ ಮಾಡಿದೆ. ಎಂದು ಸರ್ಕಾರ ವಿರುದ್ಧ ವಾಗ್ದಾಳಿಯನ್ನು ನಡೆಸಿದ್ದಾರೆ,
ಸರ್ಕಾರ ತಕ್ಷಣವೇ ಪರಿಶೀಲಿಸಿ ಕೊಪ್ಪಳವನ್ನು ಬರಪೀಡಿತ ಎಂದು ಘೋಷಿಸಬೇಕು ಹಾಗೂ ರೈತರ ಸಾಲ ಮನ್ನಾ ಮಾಡಿ ಸೂಕ್ತ ಪರಿಹಾರ ನೀಡಬೇಕು’ ಎಂದು ತೀವ್ರವಾಗಿ ಆಗ್ರಹಿಸಿದ್ದಾರೆ.
ಈ ಪಾದಯಾತ್ರೆಯಲ್ಲಿ ಮಾಜಿ ಸಚಿವ ವೆಂಕಟರಾವ್ ನಾಡಗೌಡ, ಪ್ರಮುಖರಾದ ಈರಪ್ಪ ಮದಿನೂರು, ಮುಕೇಶಪ್ಪ, ರಮೇಶ ಸೇರಿದಂತೆ ನೂರಾರು ರೈತರು ಹಾಗೂ ಜೆಡಿಎಸ್ ಕಾರ್ಯಕರ್ತರು ಭಾಗವಹಿಸಿದ್ದಾರೆ. ರೈತರ ಈ ಹೋರಾಟಕ್ಕೆ ಸರ್ಕಾರ ಹೇಗೆ ಸ್ಪಂದಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.




