Hubli News: ಸೆ.18-19ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಕರ್ನಾಟಕ ಪ್ರವಾಸ

Hubli News: ಕೇಂದ್ರ ಗೃಹ ಹಾಗೂ ಸಹಕಾರ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 18 ಮತ್ತು 19ರಂದು ಕರ್ನಾಟಕ ಪ್ರವಾಸ ಕೈಗೊಳ್ಳಲಿದ್ದಾರೆ.

ಎರಡು ದಿನಗಳ ಪ್ರವಾಸದ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 18ರ ರಾತ್ರಿ ಹುಬ್ಬಳ್ಳಿಗೆ ಆಗಮಿಸಲಿರುವ ಅಮಿತ್ ಶಾ, ಸೆಪ್ಟೆಂಬರ್ 19ರಂದು KLE JGMM ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆಯ ನೂತನ ಕಟ್ಟಡವನ್ನು ಉದ್ಘಾಟಿಸಲಿದ್ದಾರೆ.

ಸೆಪ್ಟೆಂಬರ್ 18ರ ಸಂಜೆ 7.30ಕ್ಕೆ ಗುಜರಾತ್‌ನ ಅಹಮದಾಬಾದ್ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದ ಮೂಲಕ ಹೊರಡಲಿರುವ ಅಮಿತ್ ಶಾ, ರಾತ್ರಿ 9.10ಕ್ಕೆ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ.

ವಿಮಾನ ನಿಲ್ದಾಣದಿಂದ ರಸ್ತೆ ಮಾರ್ಗವಾಗಿ ರಾತ್ರಿ 9.25ಕ್ಕೆ ಡೆನಿಸನ್ಸ್ ಹೋಟೆಲ್‌ಗೆ ತೆರಳಲಿರುವ ಅಮಿತ್ ಶಾ, ಅಲ್ಲಿ ರಾತ್ರಿ ವಾಸ್ತವ್ಯ ಹೂಡಲಿದ್ದಾರೆ.

ಸೆಪ್ಟೆಂಬರ್ 19ರಂದು ಬೆಳಗ್ಗೆ 11.15ಕ್ಕೆ ಡೆನಿಸನ್ಸ್ ಹೋಟೆಲ್‌ನಿಂದ ಹೊರಟು 11.25ಕ್ಕೆ KLE JGMM ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆಗೆ ಆಗಮಿಸಲಿದ್ದಾರೆ. ಬೆಳಗ್ಗೆ 11.30ರಿಂದ ಮಧ್ಯಾಹ್ನ 1 ಗಂಟೆಯವರೆಗೆ ನೂತನ ಕಟ್ಟಡದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಮಧ್ಯಾಹ್ನ 1ರಿಂದ 1.40ರವರೆಗೆ ಸ್ಥಳದಲ್ಲೇ ಊಟದ ಕಾರ್ಯಕ್ರಮ ನಿಗದಿಯಾಗಿದೆ. ಬಳಿಕ ಮಧ್ಯಾಹ್ನ 1.55ಕ್ಕೆ ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ಹೆಲಿಕಾಪ್ಟರ್ ಮೂಲಕ ಮಹಾರಾಷ್ಟ್ರದ ಕೊಲ್ಹಾಪುರಕ್ಕೆ ತೆರಳಲಿದ್ದಾರೆ.

ಕೊಲ್ಹಾಪುರದಿಂದ ಹೆಲಿಕಾಪ್ಟರ್ ಮೂಲಕ ಚಿಕ್ಕೋಡಿ ತಾಲೂಕಿನ ಎಕ್ಸಂಬಾಗೆ ಆಗಮಿಸಲಿರುವ ಅಮಿತ್ ಶಾ, ಸಂಜೆ 3.05ರಿಂದ 4.35ರವರೆಗೆ ಶ್ರೀ ಬೀರೇಶ್ವರ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿಯ ನೂತನ ಮುಖ್ಯ ಕಚೇರಿ ಕಟ್ಟಡದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಅಮಿತ್ ಶಾ ಅವರ ಹುಬ್ಬಳ್ಳಿ ಭೇಟಿ ಹಿನ್ನೆಲೆಯಲ್ಲಿ ನಗರದಲ್ಲಿ ಭದ್ರತಾ ವ್ಯವಸ್ಥೆ ಮತ್ತಷ್ಟು ಬಿಗಿಗೊಳ್ಳುವ ನಿರೀಕ್ಷೆಯಿದೆ. KLEಯ ನೂತನ ವೈದ್ಯಕೀಯ ಕಾಲೇಜು ಹಾಗೂ 1,200 ಹಾಸಿಗೆಗಳ ಆಸ್ಪತ್ರೆ ಉದ್ಘಾಟನೆ ಉತ್ತರ ಕರ್ನಾಟಕದ ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ ಸೇವಾ ಕ್ಷೇತ್ರದಲ್ಲಿ ಮಹತ್ವದ ಕಾರ್ಯಕ್ರಮವಾಗಲಿದೆ.

About The Author