Political News: ದಲಿತರ ಹಣ ಗ್ಯಾರಂಟಿ ಯೋಜನೆಗೆ ಮೀಸಲಿಡಲಾಗಿದೆ ಎಂಬ ಸಿಎಂ ಹೇಳಿಕೆಗೆ ಸಿ.ಟಿ.ರವಿ ಟೀಕೆ

Political News: ದಲಿತಪರ ಯೋಜನೆಗಾಗಿ ಇರಿಸಿದ್ದ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಮೀಸಲಿಡಲಾಗಿದೆ ಎಂದು ಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆ ನೀಡಿದ್ದು, ಬಿಜೆಪಿ ನಾಯಕ ಸಿ.ಟಿ.ರವಿ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತಮ್ಮ ಎಕ್ಸ್ ಖಾತೆಯಲ್ಲಿ ಈ ಬಗ್ಗೆ ಬರೆದಿರುವ ಅವರು, ರಾಜ್ಯ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ, ದಲಿತರ ಅಭಿವೃದ್ಧಿಗೆ ಮೀಸಲಿಟ್ಟ ನಿಧಿಗಳನ್ನು, ಎಸ್‌ಸಿಪಿ-ಟಿಎಸ್‌ಪಿ ಹಣವನ್ನು ದುರುಪಯೋಗ ಪಡಿಸಿಕೊಂಡಿದೆ ಎಂದು ನಾವು ಮೊದಲಿನಿಂದಲೂ ಆರೋಪಿಸುತ್ತಲೇ ಬಂದಿದ್ದೆವು. ಅದನ್ನು ಈಗ ಸ್ವತಃ ಮುಖ್ಯಮಂತ್ರಿ ಡಿಕೆಶಿ ಅವರು ಬಹಿರಂಗವಾಗಿಯೇ ಒಪ್ಪಿಕೊಂಡಿದ್ದಾರೆ.

ಗ್ಯಾರಂಟಿ ಯೋಜನೆ ಜಾರಿಗೆ ತರುವಾಗಲೇ ಅದಕ್ಕೆ ಬೇಕಾದಷ್ಟು ಬಂಡವಾಳ ನಮ್ಮಲ್ಲಿದೆಯೇ, ಅದನ್ನು ಒದಗಿಸುವುದು ಹೇಗೆ ಎನ್ನುವ ಕುರಿತೂ ಸರ್ಕಾರ ಆಲೋಚಿಸಬೇಕಿತ್ತು. ಆದರೆ, ಮನಸೋ ಇಚ್ಛೆ ಗ್ಯಾರಂಟಿ ಯೋಜನೆಯನ್ನು ಜಾರಿಗೆ ತಂದು, ದಲಿತರ ಅಭಿವೃದ್ಧಿಗಾಗಿ ಮೀಸಲಿಟ್ಟ ನಿಧಿಯನ್ನು ದುರುಪಯೋಗ ಪಡಿಸಿಕೊಂಡಿರುವುದು ಅಕ್ಷಮ್ಯ ಎಂದು ರವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ಸರ್ಕಾರಕ್ಕೆ ತನ್ನ ವೋಟ್ ಬ್ಯಾಂಕ್ ಮುಖ್ಯವೇ ಹೊರತು, ದಲಿತರ ಅಭಿವೃದ್ಧಿಯಲ್ಲ. ಕಾಂಗ್ರೆಸ್ ಪಕ್ಷ ಆಂತರ್ಯದಿಂದ ದಲಿತ ವಿರೋಧಿಯಾಗಿದ್ದು, ದಲಿತರ ಮತಗಳು ಮಾತ್ರವೇ ಆ ಪಕ್ಷಕ್ಕೆ ಬೇಕಿದೆ. ದಲಿತರಿಗೆ ನ್ಯಾಯಯುತವಾಗಿ ಸಲ್ಲಬೇಕಾದ ಹಣವನ್ನು ಸರ್ಕಾರ ಮರಳಿಸಲೇಬೇಕು. ಎಸ್‌ಸಿಪಿ-ಟಿಎಸ್‌ಪಿ ನಿಧಿಯನ್ನು ದಲಿತರ ಅಭಿವೃದ್ಧಿಗೆ ಬಳಸಬೇಕೇ ಹೊರತು, ಗ್ಯಾರಂಟಿ ಯೋಜನೆಗಳಿಗಲ್ಲ! ಎಂದು ಸಿ.ಟಿ.ರವಿ ಹೇಳಿದ್ದಾರೆ.

About The Author