ಬೇಲಿಯೇ ಎದ್ದು ಹೊಲ ಮೇಯ್ದರೆ ಏನಾಗುತ್ತದೆ?: ಸಚಿವ ಲಮಾಣಿಗೆ ದಂಡ ವಿಧಿಸಿದ ಬಗ್ಗೆ ವಿಜಯೇಂದ್ರ ಪ್ರಶ್ನೆ

Political News: ಕಲ್ಲು ಗಣಿಗಾರಿಕೆ ನಿಯಮ ಉಲ್ಲಂಘಿಸಿದ ಕಾರಣಕ್ಕೆ ಸಚಿವ ರುದ್ರಪ್ಪ ಲಮಾಣಿಗೆ 3 ಕೋಟಿ ರೂಪಾಯಿ ದಂಡ ವಿಧಿಸಿದ್ದು, ಈ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವ್ಯಂಗ್ಯವಾಡಿದ್ದಾರೆ. ಬೇಲಿಯೇ ಎದ್ದು ಹೊಲ ಮೇಯ್ದರೆ ಏನಾಗುತ್ತದೆ? ಎಂದು ವಿಜಯೇಂದ್ರ ಪ್ರಶ್ನಿಸಿದ್ದಾರೆ.

ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಪ್ರಶ್ನಿಸಿರುವ ವಿಜಯೇಂದ್ರ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಅಧಿಕಾರಸ್ಥರ ಅಧಿಕಾರ ದುರುಪಯೋಗ ಮಿತಿಮೀರಿದೆ. ಕರ್ನಾಟಕ ಸರ್ಕಾರದ ಜವಳಿ ಹಾಗೂ ಸಕ್ಕರೆ ಸಚಿವ ರುದ್ರಪ್ಪ ಲಮಾಣಿ ಅವರಿಗೆ ಸೇರಿದ ಕಲ್ಲು ಗಣಿಗಾರಿಕೆಯಲ್ಲಿ ದೊಡ್ಡ ಪ್ರಮಾಣದ ಅಕ್ರಮ ಕಂಡು ಬಂದಿರುವುದು ಹಾಗೂ ಸ್ವತಃ ರಾಜ್ಯ ಸರ್ಕಾರದ ಅಧಿಕಾರಿಗಳು 3.52 ಕೋಟಿ ರೂಪಾಯಿ ದಂಡ ವಿಧಿಸಿರುವುದು ಕಾಂಗ್ರೆಸ್ ದುರಾಡಳಿತಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ಕಾಂಗ್ರೆಸ್ ಸರ್ಕಾರದ ಸಚಿವರು ಅಲ್ಲದೆ ಆಡಳಿತರೂಢ ಪಕ್ಷದ ಶಾಸಕ ಬಸವರಾಜ್ ಶಿವಣ್ಣವರ್ ಅವರ ಕುಟುಂಬಸ್ಥರ ವಿರುದ್ಧವು ಅಕ್ರಮ ಕಲ್ಲು ಗಣಿಗಾರಿಕೆ ಆರೋಪ ಕೇಳಿ ಬಂದಿದೆ. ರಾಜ್ಯದಲ್ಲಿ ಆಡಳಿತ ಪಕ್ಷದವರ ಅಧಿಕಾರ ದುರುಪಯೋಗಕ್ಕೆ ಇದಕ್ಕಿಂತ ದೊಡ್ಡ ಉದಾಹರಣೆ ಬೇಕಿಲ್ಲ.

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕೂಡಲೇ ತಮ್ಮ ಸಚಿವ ಸಂಪುಟದ ಸಚಿವರ ವಿರುದ್ಧ ಕ್ರಮ ಜರುಗಿಸಬೇಕು. ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿರುವ ಕಾಂಗ್ರೆಸ್ ಮಾತ್ರವಲ್ಲದೆ ಯಾವುದೇ ವ್ಯಕ್ತಿಗಳ ವಿರುದ್ಧ ಪಕ್ಷತೀತ ಹಾಗೂ ಪಾರದರ್ಶಕವಾಗಿ ಕಾನೂನು ಕ್ರಮ ಜರುಗಿಸಬೇಕು.

ಇಲ್ಲದಿದ್ದರೆ ಸರ್ಕಾರವೇ ನಿಂತು ಅಕ್ರಮ ಚಟುವಟಿಕೆಗಳನ್ನು ನಡೆಸಿದಂತಾಗುತ್ತದೆ. ಇದರಿಂದ ಜನರಲ್ಲಿ ಸರ್ಕಾರ ಮತ್ತು ಕಾನೂನಿನ ಬಗ್ಗೆ ಜಿಗುಪ್ಸೆ ಉಂಟಾಗುತ್ತದೆ. ಮಾತೆತ್ತಿದರೆ ಭ್ರಷ್ಟಾಚಾರ ರಹಿತ ಆಡಳಿತ ಕೊಡುತ್ತೇನೆ ಎನ್ನುವ ಮುಖ್ಯಮಂತ್ರಿಗಳು ಸಚಿವ ರುದ್ರಪ್ಪ ಲಮಾಣಿ ವಿಚಾರದಲ್ಲಿ ಪ್ರಾಮಾಣಿಕವಾಗಿ ವರ್ತಿಸದಿದ್ದರೆ ತಮ್ಮ ಮಾತನ್ನು ತಾವೇ ಮೀರಿದಂತಾಗುತ್ತದೆ.

About The Author