Koppala News: ಗಣೇಶ ವಿಸರ್ಜನೆ ಅಂದ್ರೆ ಡಿಜೆ ಸೌಂಡ್, ಕುಣಿತ ಅನ್ನೋ ಕಾಲದಲ್ಲಿ, ಡಿಜೆಗೆ ಕೋಕ್ ನೀಡಿ, ಕೊಪ್ಪಳದಲ್ಲಿ ಸಂಪೂರ್ಣ ಸಾಂಸ್ೃತಿಕವಾಗಿ ಭಕ್ತಿ ಭಾವದ ಜತೆ ಗಣೇಶ ವಿಸರ್ಜನೆ ಮಾಡಲಾಗಿದೆ.
ಕೊಪ್ಪಳ ತಾಲೂಕಿನ ಗಿಣಿಗೇರ ಗ್ರಾಮದಲ್ಲಿ ಸಾಂಸ್ಕೃತಿಕ ವೈಭವ ಮತ್ತು ಭಕ್ತಿಭಾವದೊಂದಿಗೆ ಗಣೇಶೋತ್ಸವ ಸಂಭ್ರಮ ಮುಗಿಲು ಮುಟ್ಟಿತ್ತು.
ಗಿಣಿಗೇರದ ನವಚೇತನ ತರುಣ ಸಂಘ ಹಾಗೂ ನವಚೇತನ ಮಹಿಳಾ ಸಂಘದ ಜಂಟಿ ಆಶ್ರಯದಲ್ಲಿ ಆಯೋಜಿಸಲಾಗಿದ್ದ 22ನೇ ವರ್ಷದ ಗಣೇಶೋತ್ಸವದ ಮೂರ್ತಿ ವಿಸರ್ಜನೆ ಕಾರ್ಯಕ್ರಮವು ಅತ್ಯಂತ ವಿಜೃಂಭಣೆಯಿಂದ ನೆರವೇರಿತು.
ಡಿಜೆ ಅಬ್ಬರದ ಸದ್ದಿಗೆ ಕೊಕ್ ನೀಡಿ, ಪೂರ್ಣ ಪ್ರಮಾಣದ ಸಾಂಪ್ರದಾಯಿಕ ಶೈಲಿಯಲ್ಲಿ ಮೂರ್ತಿ ವಿಸರ್ಜನೆ ಮಾಡಿರುವುದು ಈ ಬಾರಿಯ ವಿಶೇಷವಾಗಿತ್ತು. ಶರಾವಣಭವ ತಂಡದ ಚಂಡೆ ವಾದ್ಯದ ಗಂಭೀರ ನಾದ ಹಾಗೂ ಶುಭಶ್ರೀ ಅವರ ಅದ್ಭುತ ವಯಲಿನ್ ವಾದನದ ನಾದ ಗ್ರಾಮದ ಬೀದಿಬೀದಿಗಳಲ್ಲಿ ತೇಲಿಬಂತು.
ಸಂಗೀತ ಮತ್ತು ವಾದ್ಯಗಳ ತಾಳಕ್ಕೆ ತಕ್ಕಂತೆ ಯುವಕರು ಮಾತ್ರವಲ್ಲದೆ, ನವಚೇತನ ಮಹಿಳಾ ಸಂಘದ ಮಹಿಳೆಯರೂ ಸಹ ಅತ್ಯಂತ ಉತ್ಸಾಹದಿಂದ ಹೆಜ್ಜೆ ಹಾಕಿ ಕುಣಿದು ಸಂಭ್ರಮಿಸಿದರು.
ಶಬ್ದ ಮಾಲಿನ್ಯವಿಲ್ಲದೆ, ಡಿಜೆ ಸೌಂಡ್ಗೆ ಕುಣಿದು ಕೊಪ್ಪಳಿಸದೆ, ನಮ್ಮ ಮಣ್ಣಿನ ಸಂಸ್ಕೃತಿ ಮತ್ತು ಕಲಾತಂಡಗಳ ಮೆರುಗಿನೊಂದಿಗೆ ನಡೆದ ಈ ಭವ್ಯ ಮೆರವಣಿಗೆಯನ್ನು ಗ್ರಾಮಸ್ಥರು ಕಣ್ಣುಂಬಿಕೊಂಡು ಶ್ಲಾಘಿಸಿದರು.
ಸಂಪ್ರದಾಯ ಹಾಗೂ ಸೌಹಾರ್ದತೆಗೆ ಸಾಕ್ಷಿಯಾದ ಗಿಣಿಗೇರದ ಈ ಗಣೇಶ ವಿಸರ್ಜನೆ ಕಾರ್ಯಕ್ರಮವು ಸುತ್ತಮುತ್ತಲ ಜಿಲ್ಲೆಗಳಿಗೆ ಮಾದರಿಯಾಗಿದೆ.




