ಎಟಿಎಂ ಕೇಂದ್ರದಿಂದ ಹಣ ವಿತ್‌ಡ್ರಾ ಮಾಡುವಾಗ ನಿಮ್ಮ ಅಕೌಂಟ್‌ನಿಂದ ಹಣ ಕಟ್ ಆಗಿ, ಆ ಹಣ ಕೈಗೆ ಬಾರದೇ ಹೋದರೆ ಆತಂಕಗೊಳ್ಳುವುದು ಸಹಜ. ಇಂತಹ ಸಂದರ್ಭದಲ್ಲಿ ಗ್ರಾಹಕರು ಏನು ಮಾಡಬೇಕು? ಆರ್.ಬಿ.ಐ ನಿಯಮಗಳೇನು ಹೇಳುತ್ತವೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
ಎಟಿಎಂ ವಹಿವಾಟು ವಿಫಲವಾದಾಗ ತಕ್ಷಣವೇ ಯಾವುದೇ ಕಾರಣಕ್ಕೂ ಆತಂಕಪಡಬೇಡಿ. ಮೊದಲಿಗೆ ಎಟಿಎಂನಿಂದ ಬಂದ ರಸೀದಿ ಹಾಗೂ ಮೊಬೈಲ್‌ಗೆ ಬಂದ ಎಸ್‌ಎಂಎಸ್ ಸಂದೇಶವನ್ನು ಭದ್ರವಾಗಿಟ್ಟುಕೊಳ್ಳಿ. ಇದರಲ್ಲಿರುವ Transaction ID, ATM ID, ದಿನಾಂಕ ಮತ್ತು ಸಮಯದ ವಿವರಗಳು ಅತ್ಯಂತ ಮುಖ್ಯವಾಗಿರುತ್ತವೆ.
ಸಾಮಾನ್ಯವಾಗಿ ಬಹುತೇಕ ಬ್ಯಾಂಕ್‌ಗಳು ತಾಂತ್ರಿಕ ದೋಷವನ್ನು ತಾವೇ ಗುರುತಿಸಿ 24 ಗಂಟೆಗಳ ಒಳಗೆ ಹಣವನ್ನು ನಿಮ್ಮ ಖಾತೆಗೆ ಮರು ಜಮೆ ಮಾಡುತ್ತವೆ. ಇದರ ಜೊತೆಗೆ ಬ್ಯಾಂಕ್‌ಗೆ ದೂರು ನೀಡುವುದು ಹೇಗೆ? ಅಂತ ನೋಡೋಣ. ಒಂದು ವೇಳೆ 24 ಗಂಟೆ ಕಳೆದರೂ ಹಣ ಮರಳಿ ಬಾರದಿದ್ದರೆ, ನೀವು ಎಟಿಎಂ ಇರುವ ಬ್ಯಾಂಕ್‌ಗೆ ಹೋಗುವ ಬದಲು ನಿಮ್ಮ ಖಾತೆ ಇರುವ ಮುಖ್ಯ ಶಾಖೆಗೆ ದೂರು ನೀಡಬೇಕು. ಕಸ್ಟಮರ್ ಕೇರ್ ಮೂಲಕ ಕರೆ ಮಾಡಿ ದೂರು ದಾಖಲಿಸಬಹುದು. ನೆಟ್ ಬ್ಯಾಂಕಿಂಗ್ ಅಥವಾ ಮೊಬೈಲ್ ಆಪ್ ಮೂಲಕ “Dispute Transaction” ವಿಭಾಗದಲ್ಲಿ ಅರ್ಜಿ ಸಲ್ಲಿಸಬಹುದು.
ನೇರವಾಗಿ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ಚಾರ್ಜ್‌ಬ್ಯಾಕ್ ಫಾರಂ ಭರ್ತಿ ಮಾಡಿ ಕೊಡಬಹುದು. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನಿಯಮಗಳ ಪ್ರಕಾರ, ನೀವು ‘ವಹಿವಾಟು ನಡೆದ 30 ದಿನಗಳ ಒಳಗೆ ದೂರು ದಾಖಲಿಸಬೇಕು. ಹೀಗೆ ದೂರು ನೀಡಿದ ದಿನದಿಂದ ಗರಿಷ್ಠ 5 ಕೆಲಸದ ದಿನಗಳ ಒಳಗೆ ಬ್ಯಾಂಕ್ ನಿಮ್ಮ ಹಣವನ್ನು ಮರುಪಾವತಿಸಬೇಕು.
ಒಂದೊಮ್ಮೆ ಬ್ಯಾಂಕ್ 5 ದಿನಗಳೊಳಗೆ ಹಣ ನೀಡಲು ವಿಳಂಬ ಮಾಡಿದರೆ, ವಿಳಂಬವಾದ ಪ್ರತಿಯೊಂದು ದಿನಕ್ಕೂ ಬ್ಯಾಂಕ್ ನಿಮಗೆ ದಿನಕ್ಕೆ 100 ರೂ. ನಷ್ಟಪರಿಹಾರ ನೀಡಬೇಕಾಗುತ್ತದೆ! ಒಂದು ತಿಂಗಳಾದರೂ ಸಮಸ್ಯೆ ಬಗೆಹರಿಯದಿದ್ದರೆ, ಬ್ಯಾಂಕಿನ ಪ್ರಿನ್ಸಿಪಲ್ ನೋಡಲ್ ಅಧಿಕಾರಿಗೆ ಇಮೇಲ್ ಮಾಡಬಹುದು ಅಥವಾ ಆರ್‌ಬಿಐ ಒಂಬುಡ್ಸ್‌ಮನ್ ಪೋರ್ಟಲ್ ಮೂಲಕ ಆನ್‌ಲೈನ್ ದೂರು ದಾಖಲಿಸಬಹುದು. ಹಣ ಕಡಿತಗೊಂಡ ತಕ್ಷಣ ರಸೀದಿ ಕಳೆದುಕೊಳ್ಳದೆ ಎಚ್ಚೆತ್ತುಕೊಂಡರೆ, ನಿಮ್ಮ ಹಣ ಯಾವುದೇ ನಷ್ಟವಿಲ್ಲದೆ ವಾಪಸ್ ಸಿಗುತ್ತದೆ.




