ಅಕ್ಟೋಬರ್ 2ರ ಗಾಂಧಿ ಜಯಂತಿಯಂದು ಫೋನ್‌ಪೇ, ಗೂಗಲ್ ಪೇ ಸೇರಿದಂತೆ ಯಾವುದೇ ಯುಪಿಐ ಪಾವತಿಗಳು ವರ್ಕ್ ಆಗುವುದಿಲ್ಲವೇ? ದೇಶದ ಜನತೆಯಲ್ಲಿ ಇಂತಹದ್ದೊಂದು ಪ್ರಶ್ನೆ ಮೂಡಿದೆ. ಯುಪಿಐ ವಹಿವಾಟುಗಳ ಮೇಲೆ ವಿಧಿಸಿರುವ ಹೊಸ ಎಂಡಿಆರ್ ಶುಲ್ಕವನ್ನು ವಿರೋಧಿಸಿ, ಭಾರತದಾದ್ಯಂತ ಇರುವ ಮೊಬೈಲ್ ಫೋನ್ ಚಿಲ್ಲರೆ ವ್ಯಾಪಾರಿಗಳು ಅಕ್ಟೋಬರ್ 2 ರಂದು “No UPI Day” ಅಂದರೆ ಯುಪಿಐ ರಹಿತ ದಿನ ಆಚರಿಸಲು ನಿರ್ಧರಿಸಿದ್ದಾರೆ.
ಅಕ್ಟೋಬರ್ 15 ರಿಂದ ಜಾರಿಗೆ ಬರುವಂತೆ, ವ್ಯಾಪಾರಿಗಳಿಗೆ ನಡೆಯುವ 2,000 ರೂಪಾಯಿಗಿಂತ ಹೆಚ್ಚಿನ ಮೊತ್ತದ ಯುಪಿಐ ವರ್ಗಾವಣೆಗಳ ಮೇಲೆ ಸರ್ಕಾರ ಶೇಕಡಾ 0.4 ರಷ್ಟು ಎಂಡಿಆರ್ ಶುಲ್ಕ ವಿಧಿಸಿದೆ. ಇದರಿಂದ ತಿಂಗಳಿಗೆ ಲಕ್ಷಾಂತರ ರೂ. ವಹಿವಾಟು ನಡೆಸುವ ಸಣ್ಣ ಚಿಲ್ಲರೆ ವ್ಯಾಪಾರಿಗಳಿಗೆ ಸಾವಿರಾರು ರೂಪಾಯಿಗಳ ನಿವ್ವಳ ನಷ್ಟವಾಗಲಿದೆ ಎಂದು ಅಖಿಲ ಭಾರತ ಮೊಬೈಲ್ ರಿಟೇಲರ್ಸ್ ಅಸೋಸಿಯೇಷನ್ ಕಳವಳ ವ್ಯಕ್ತಪಡಿಸಿದೆ. ಈ ಶುಲ್ಕದಿಂದಾಗಿ ದೇಶದ ಚಿಲ್ಲರೆ ವ್ಯಾಪಾರಿಗಳ ಮೇಲೆ ವರ್ಷಕ್ಕೆ ಬರೋಬ್ಬರಿ 500 ಕೋಟಿ ರೂ.ಗಳಷ್ಟು ಆರ್ಥಿಕ ಹೊರೆ ಬೀಳಲಿದೆ ಎಂದು ಅಂದಾಜಿಸಲಾಗಿದೆ.
ಈ ಪ್ರತಿಭಟನೆಯ ಭಾಗವಾಗಿ ಅಕ್ಟೋಬರ್ 2ರಂದು ಚಿಲ್ಲರೆ ವ್ಯಾಪಾರಿಗಳು ಸಾಂಕೇತಿಕವಾಗಿ ತಮ್ಮ ಕ್ಯೂಆರ್ ಕೋಡ್‌ಗಳನ್ನು ಕಪ್ಪು ಬಟ್ಟೆಯಿಂದ ಮುಚ್ಚಿಡಲಿದ್ದಾರೆ ಮತ್ತು ಅಂದು ಯುಪಿಐ ಮೂಲಕ ಯಾವುದೇ ಪಾವತಿಗಳನ್ನು ಸ್ವೀಕರಿಸುವುದಿಲ್ಲ.
ಆದರೆ ಇದು ಡಿಜಿಟಲ್ ಇಂಡಿಯಾ ವಿರುದ್ಧದ ಪ್ರತಿಭಟನೆಯಲ್ಲ, ಬದಲಿಗೆ ಡಿಜಿಟಲ್ ಪಾವತಿಗಳು ವ್ಯಾಪಾರಿಗಳಿಗೆ ಕೈಗೆಟುಕುವ ದರದಲ್ಲಿರಬೇಕು ಎಂದು ವ್ಯಾಪಾರಿಗಳು ಸ್ಪಷ್ಟಪಡಿಸಿದ್ದಾರೆ. ಯುಪಿಐ ಪಾವತಿಗಳು ಎಂದಿನಂತೆ ‘ಶೂನ್ಯ ಎಂಡಿಆರ್’ ರಚನೆಯಡಿಯಲ್ಲೇ ಮುಂದುವರಿಯಬೇಕು ಎಂಬುದು ಇವರ ಪ್ರಮುಖ ಬೇಡಿಕೆಯಾಗಿದೆ.
ಅಕ್ಟೋಬರ್ 2ರಂದು ವ್ಯಾಪಾರಿಗಳ ಈ ಸಾಂಕೇತಿಕ ಮುಷ್ಕರದಿಂದಾಗಿ ಗ್ರಾಹಕರಿಗೆ ಡಿಜಿಟಲ್ ಪಾವತಿ ಮಾಡುವಾಗ ಕೆಲವು ತೊಂದರೆಗಳು ಎದುರಾಗುವ ಸಾಧ್ಯತೆಯಿದೆ. ಸರ್ಕಾರದ ಈ ಹೊಸ ಶುಲ್ಕ ನೀತಿಯ ವಿರುದ್ಧ ವ್ಯಾಪಾರಿಗಳ ಹೋರಾಟ ಯಾವ ರೂಪ ಪಡೆಯಲಿದೆ ಎಂಬುದನ್ನು ಕಾದುನೋಡಬೇಕು.




