ಸದ್ಯದಲ್ಲೇ ಎಲ್ಲವು ಕೊನೆಯಾಗಲಿದೆ; ಜನರ ಜೇಬಿಗೆ ಕನ್ನ ಹಾಕಬೇಡಿ – HDK

ರಾಜ್ಯದಲ್ಲಿ ಅಧಿಕಾರ ಕೊಟ್ಟಿರುವುದು ಕಳ್ಳ-ಕಾಕರನ್ನು ರಕ್ಷಣೆ ಮಾಡುವುದಕ್ಕಲ್ಲ ಎಂದು ಕೇಂದ್ರ ಸಚಿವ ಹಾಗೂ ಜೆಡಿಎಸ್ ನಾಯಕ ಹೆಚ್.ಡಿ. ಕುಮಾರಸ್ವಾಮಿ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಜೆಡಿಎಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರದ ವಿರುದ್ಧ ಸ್ಫೋಟಕ ಎಚ್ಚರಿಕೆ ನೀಡುವುದರ ಜೊತೆಗೆ ನಂದಿನಿ ಹಾಲಿನ ದರ ಏರಿಕೆ ಪ್ರಸ್ತಾವನೆಯನ್ನು ತೀವ್ರವಾಗಿ ವಿರೋಧಿಸಿದ್ದಾರೆ.

ತಮ್ಮ ಬಳಿ ಇರುವ ಪ್ರಮುಖ ವಿಚಾರಗಳನ್ನು ಹಂತ ಹಂತವಾಗಿ ಹೊರಹಾಕುವುದಾಗಿ ತಿಳಿಸಿರುವ ಕುಮಾರಸ್ವಾಮಿ, “ನಾನು ಎಂದಿಗೂ ‘ಹಿಟ್ ಅಂಡ್ ರನ್’ ರಾಜಕಾರಣ ಮಾಡುವುದಿಲ್ಲ. ಸ್ವಲ್ಪ ತಡೆಯಿರಿ, ಎಲ್ಲದಕ್ಕೂ ಸೂಕ್ತ ಸಮಯದಲ್ಲಿ ಸರಿಯಾಗಿಯೇ ಉತ್ತರ ನೀಡುತ್ತೇನೆ. ಕಾಲ ಬಂದಾಗ ಪ್ರತಿಯೊಂದನ್ನೂ ಹೊರಹಾಕುತ್ತೇನೆ. ಸದ್ಯ ನೀವು ಅಂತಿಮ ಘಟ್ಟ ತಲುಪಿದ್ದೀರಿ, ಎಲ್ಲವೂ ಶೀಘ್ರದಲ್ಲೇ ಮುಗಿಯಲಿದೆ” ಎಂದು ಸರ್ಕಾರಕ್ಕೆ ನೇರ ಎಚ್ಚರಿಕೆ ಸಂದೇಶ ರವೋದಿಸಿದ್ದಾರೆ.

ಇದೇ ವೇಳೆ ನಂದಿನಿ ಹಾಲಿನ ದರ ಹೆಚ್ಚಳ ಮಾಡುವ ಸರ್ಕಾರದ ನಿರ್ಧಾರವನ್ನು ಖಂಡಿಸಿದ ಅವರು, ಸಾರ್ವಜನಿಕರ ಮೇಲೆ ಮತ್ತೆ ಬೆಲೆ ಏರಿಕೆಯ ಹೊರೆಸುವುದು ಸರಿಯಲ್ಲ ಎಂದಿದ್ದಾರೆ.

ಸರ್ಕಾರ ಈಗಾಗಲೇ ಗ್ಯಾರಂಟಿ ಯೋಜನೆಗಳಿಗೆ ಪ್ರತ್ಯೇಕವಾಗಿ ಹಣ ಮೀಸಲಿಟ್ಟಿರುವ ಮಾದರಿಯಲ್ಲೇ, ಇದನ್ನು ‘6ನೇ ಗ್ಯಾರಂಟಿ’ ಎಂದು ಪರಿಗಣಿಸಿ ರೈತರಿಗೆ ನೀಡುವ ಹಾಲಿನ ಪ್ರೋತ್ಸಾಹ ಧನವನ್ನು ಹೆಚ್ಚಿಸಬೇಕು ಎಂದು ಒತ್ತಾಯಿಸಿದ್ದಾರೆ. ಜನಸಾಮಾನ್ಯರಿಗೂ ಹೊರೆಯಾಗದಂತೆ ಹಾಗೂ ರೈತರಿಗೂ ತೊಂದರೆಯಾಗದಂತೆ, ಪ್ರಸ್ತುತ ಇರುವ 5 ರೂ. ಪ್ರೋತ್ಸಾಹ ಧನವನ್ನು 10 ರೂ.ಗೆ ಏರಿಕೆ ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಜನರ ಜೇಬಿಗೆ ಕನ್ನ ಹಾಕದೆ, ಸರ್ಕಾರವೇ ಸ್ವತಃ ಸಬ್ಸಿಡಿ ನೀಡುವ ಮೂಲಕ ಅನ್ನದಾತ ರೈತರ ನೆರವಿಗೆ ಬರಬೇಕು ಎಂದು ಕುಮಾರಸ್ವಾಮಿ ಆಗ್ರಹಿಸಿದ್ದಾರೆ. ಗ್ಯಾರಂಟಿಗಳಿಗೆ ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತಿರುವ ಸರ್ಕಾರ, ರೈತರಿಗಾಗಿ ಈ ಪ್ರೋತ್ಸಾಹ ಧನ ಹೆಚ್ಚಳಕ್ಕೂ ಹಣ ಮೀಸಲಿಡಬೇಕು ಎಂದು ಅವರು ಆಗ್ರಹಿಸಿದ್ದು, ಇದು ರಾಜ್ಯ ರಾಜಕಾರಣದಲ್ಲಿ ಹೊಸ ಚರ್ಚೆಗೆ ಗ್ರಾಸವಾಗಿದೆ.

About The Author