ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿದ್ದ ಉದ್ಯೋಗಾಕಾಂಕ್ಷಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅಂದರೆ ಕೆಇಎ ಕಡೆಯಿಂದ ಭರ್ಜರಿ ಸಿಹಿ ಸುದ್ದಿ ಸಿಕ್ಕಿದೆ! ಹೌದು ‘ಪುರಸಭೆ ಆಡಳಿತ ನಿರ್ದೇಶನಾಲಯ ಹಾಗೂ BWSSB ಅಡಿಯಲ್ಲಿ ಖಾಲಿ ಇರುವ ಒಟ್ಟು 210 ಗ್ರೂಪ್-ಸಿ ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಹೊರಡಿಸಲಾಗಿದ್ದು, ಆನ್ಲೈನ್ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ.
ಈ ನೇಮಕಾತಿಯಡಿ ಒಟ್ಟು 210 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದ್ದು, ಆಕರ್ಷಕ ವೇತನ ಶ್ರೇಣಿಯನ್ನು ನಿಗದಿಪಡಿಸಲಾಗಿದೆ. ನೀರು ಸರಬರಾಜು ನಿರ್ವಾಹಕರು ಮತ್ತು ಎಲೆಕ್ಟ್ರಿಷಿಯನ್ ಗ್ರೇಡ್-1 ಹುದ್ದೆಗಳಿಗೆ ಮಾಸಿಕ 37,500 ರಿಂದ 76,100 ರೂಪಾಯವರೆಗೆ ವೇತನ ಸಿಗಲಿದೆ. ಇನ್ನು ಸಹಾಯಕ ನೀರು ಸರಬರಾಜು ನಿರ್ವಾಹಕರು ಹಾಗೂ ಎಲೆಕ್ಟ್ರಿಷಿಯನ್ ಗ್ರೇಡ್-2 ಹುದ್ದೆಗಳಿಗೆ ಆಯ್ಕೆಯಾಗುವವರಿಗೆ ತಿಂಗಳಿಗೆ 34,100 ರಿಂದ 67,600 ರೂಪಾಯಿ ವರೆಗೆ ವೇತನ ದೊರೆಯಲಿದೆ. ಎಸ್ಸೆಸ್ಸೆಲ್ಸಿ ಅಥವಾ ಐಟಿಐ ಪೂರ್ಣಗೊಳಿಸಿದ 18 ರಿಂದ 40 ವರ್ಷದ ಒಳಗಿನ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದ್ದು, ನಿಯಮಾನುಸಾರ ವಯೋಮಿತಿ ಸಡಿಲಿಕೆ ಕೂಡ ಇದೆ.
ಅಭ್ಯರ್ಥಿಗಳಿಗೆ ಕನ್ನಡ ಭಾಷಾ ಪರೀಕ್ಷೆ ಹಾಗೂ ವಿಷಯ ಆಧಾರಿತ ಸ್ಪರ್ಧಾತ್ಮಕ ಲಿಖಿತ ಪರೀಕ್ಷೆ ನಡೆಸಿ ಆಯ್ಕೆ ಮಾಡಲಾಗುತ್ತದೆ. ಈ ಪರೀಕ್ಷೆಯನ್ನು ಮುಂಬರುವ ನವೆಂಬರ್ ತಿಂಗಳಲ್ಲಿ ನಡೆಸಲು ಕೆಇಎ ಯೋಜನೆ ರೂಪಿಸಿದೆ. ಸಾಮಾನ್ಯ ಮತ್ತು ಇತರೆ ಪ್ರವರ್ಗದವರಿಗೆ 1,500 ರೂ. ಹಾಗೂ ಎಸ್ಸಿ, ಎಸ್ಟಿ ಹಾಗೂ ವಿಶೇಷ ವರ್ಗದವರಿಗೆ 500 ರೂ. ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ.
ಆಸಕ್ತರು ಕೆಇಎ ಅಧಿಕೃತ ವೆಬ್ಸೈಟ್ cetonline.karnataka.gov.in ಮೂಲಕ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 30 ಕೊನೆಯ ದಿನವಾಗಿದ್ದು, ಶುಲ್ಕ ಪಾವತಿಸಲು ಅಕ್ಟೋಬರ್ 1 ರವರೆಗೆ ಕಾಲಾವಕಾಶ ನೀಡಲಾಗಿದೆ. ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ಸೂಚಿಸಲಾಗಿದೆ.




