ಗೃಹಲಕ್ಷ್ಮಿ ಮಹಿಳೆಯರೇ ಗಮನಿಸಿ – ಕಠಿಣ ಕ್ರಮಕ್ಕೆ ಸಜ್ಜಾದ ಸರ್ಕಾರ!

ಗೃಹಲಕ್ಷ್ಮಿ ಯೋಜನೆಯಡಿ ಮಹಿಳೆಯರ ಖಾತೆಗೆ ಜಮೆಯಾಗುವ ಮಾಸಿಕ 2,000 ರೂಪಾಯಿ ಹಣವನ್ನು, ಯಾವುದೇ ಕಾರಣಕ್ಕೂ ಸಾಲದ ಕಂತು ಅಥವಾ ಬಡ್ಡಿಗೆ ಕಡಿತ ಮಾಡಿಕೊಳ್ಳದಂತೆ ಬ್ಯಾಂಕುಗಳು ಹಾಗೂ ಹಣಕಾಸು ಸಂಸ್ಥೆಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮುಖ್ಯ ಕಾರ್ಯದರ್ಶಿಗೆ ಆದೇಶಿಸಿದ್ದಾರೆ.

ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ರಾಜ್ಯ ಉಪಾಧ್ಯಕ್ಷ ಹಾಗೂ ಎಂಎಲ್‌ಸಿ ದಿನೇಶ್ ಗೂಳಿಗೌಡ ಅವರು ಸಲ್ಲಿಸಿದ ಮನವಿ ಪತ್ರಕ್ಕೆ ತಕ್ಷಣ ಸ್ಪಂದಿಸಿರುವ ಮುಖ್ಯಮಂತ್ರಿಗಳು, ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅವರಿಗೆ ಈ ಸೂಚನೆ ರವಾನಿಸಿದ್ದಾರೆ. ವಾಣಿಜ್ಯ ಬ್ಯಾಂಕುಗಳು, ಖಾಸಗಿ ಹಾಗೂ ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಹಣ ಜಮೆಯಾದ ಕೂಡಲೇ ಹಳೆಯ ಸಾಲದ ಬಾಕಿ ನೆಪವೊಡ್ಡಿ ಹಣ ಕಡಿತಗೊಳಿಸುತ್ತಿರುವುದು ಸರ್ಕಾರದ ಮೂಲ ಆಶಯಕ್ಕೇ ಧಕ್ಕೆ ತರುತ್ತಿದೆ ಎಂದು ಮನವಿಯಲ್ಲಿ ವಿವರಿಸಲಾಗಿತ್ತು.

ಪ್ರತಿ ತಿಂಗಳು 1 ಕೋಟಿ 24 ಲಕ್ಷಕ್ಕೂ ಅಧಿಕ ಕುಟುಂಬಗಳ ಯಜಮಾನಿಯರ ಖಾತೆಗೆ ಜಮೆಯಾಗುವ ಈ ಹಣವು ಬಡ ಕುಟುಂಬಗಳ ನಿತ್ಯದ ಅಗತ್ಯಗಳು ಹಾಗೂ ಮಕ್ಕಳ ಶಿಕ್ಷಣಕ್ಕೆ ದೊಡ್ಡ ಆಸರೆಯಾಗಿದೆ. ಆದರೆ ಫಲಾನುಭವಿಗಳ ಗಮನಕ್ಕೂ ತರದೆ ಹಣ ಮುಟ್ಟುಗೋಲು ಹಾಕಿಕೊಳ್ಳಲಾಗುತ್ತಿದೆ. ಈ ಕುರಿತು ರಾಜ್ಯ ಮಟ್ಟದ ಬ್ಯಾಂಕರ್ಸ್ ಸಮಿತಿ ಮೂಲಕ ಕಠಿಣ ಸುತ್ತೋಲೆ ಹೊರಡಿಸಬೇಕು ಹಾಗೂ ಈಗಾಗಲೇ ಕಡಿತವಾಗಿರುವ ಹಣವನ್ನು ತಕ್ಷಣ ಮರುಪಾವತಿಸಲು ಕ್ರಮಕೈಗೊಳ್ಳಬೇಕು ಎಂದು ನಿರ್ದೇಶಿಸಲಾಗಿದೆ.

ಬಲವಂತವಾಗಿ ವಸೂಲಿ ಮಾಡುವ ಅಥವಾ ಬೆದರಿಕೆ ಒಡ್ಡುವ ಮೈಕ್ರೋ ಫೈನಾನ್ಸ್ ಏಜೆಂಟರ ವಿರುದ್ಧ ಸುಲಿಗೆ ಪ್ರಕರಣ ದಾಖಲಿಸಿ, ಪರವಾನಗಿ ರದ್ದುಪಡಿಸುವ ಎಚ್ಚರಿಕೆ ನೀಡಲಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಮತ್ತು ಎಸ್‌ಪಿಗಳು ನಿರಂತರ ಮೇಲುಸ್ತುವಾರಿ ವಹಿಸುವಂತೆ ಸೂಚನೆ ನೀಡಲಾಗಿದ್ದು, ಬಡ ಮಹಿಳೆಯರಿಗೆ ಸರ್ಕಾರದ ಗ್ಯಾರಂಟಿ ಹಣ ಸಂಪೂರ್ಣವಾಗಿ ತಲುಪುವುದನ್ನು ಖಚಿತಪಡಿಸಲು ಸರ್ಕಾರ ಮುಂದಾಗಿದೆ.

About The Author