Political News: ಚುನಾವಣಾ ಆಯೋಗ SIR ನಂತರ ಪಟ್ಟಿಯಿಂದ ಹೊರಗುಳಿದ ಅರ್ಹ ಮತದಾರರನ್ನು ಗುರುತಿಸಿ ಮರುನೋಂದಣಿಗೆ ನೆರವಾಗುವ ವಿಶೇಷ ಅಭಿಯಾನಕ್ಕೆ ಸೂಚಿಸಿದೆ.
ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿರುವ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್, ಸಂತಸ ವ್ಯಕ್ತಪಡಿಸಿದ್ದಾರೆ.
SIR ಆರಂಭವಾದ ದಿನದಿಂದಲೇ ಅದರ ಪಕ್ಷಪಾತಿತನ, ಗಂಭೀರ ಲೋಪಗಳು, ಹಾಗೂ ಅರ್ಹ ಮತದಾರರು ಮತಪಟ್ಟಿಯಿಂದ ಹೊರಗುಳಿಯುವ ಅಪಾಯದ ಬಗ್ಗೆ ನಾವು ಮೌನವಾಗಿರಲಿಲ್ಲ. ಖುದ್ದಾಗಿ ನಾನೇ ಚುನಾವಣಾ ಆಯೋಗಕ್ಕೆ ಸತತವಾಗಿ ಏಳು ಪತ್ರಗಳನ್ನು ಬರೆದು, ದಾಖಲೆ ಮತ್ತು ಅಂಕಿ-ಅಂಶಗಳ ಸಹಿತ ಗಂಭೀರ ಪ್ರಶ್ನೆಗಳನ್ನು ಎತ್ತಿದ್ದೇವೆ ಎಂದು ಹರಿಪ್ರಸಾದ್ ಹೇಳಿದ್ದಾರೆ.
ಬೀದಿಯಲ್ಲಿ ಹೋರಾಟ ನಡೆಸುವುದರಿಂದ ಹಿಡಿದು ಎಲೆಕ್ಷನ್ ಕಮಿಷನ್ ಆಫ್ ಇಂಡಿಯಾದ ಕಚೇರಿವರೆಗೆ ಕಾಂಗ್ರೆಸ್ ನಡೆಸಿದ ಹೋರಾಟದ ನಡುವೆ, ಇಂದು ಆಯೋಗವೇ SIR ನಂತರ ಪಟ್ಟಿಯಿಂದ ಹೊರಗುಳಿದ ಅರ್ಹ ಮತದಾರರನ್ನು ಗುರುತಿಸಿ ಮರುನೋಂದಣಿಗೆ ನೆರವಾಗುವ ವಿಶೇಷ ಅಭಿಯಾನಕ್ಕೆ ಸೂಚಿಸಿರುವುದು ನಮ್ಮ ಆತಂಕಗಳು ಪರಿಶೀಲನೆಗೆ ಅರ್ಹವಾಗಿದ್ದವು ಎಂಬುದನ್ನು ಮತ್ತಷ್ಟು ಸ್ಪಷ್ಟಪಡಿಸಿದೆ.
2025ರ ಅಂತಿಮ ಮತಪಟ್ಟಿಯ 5,54,22,344 ಮತದಾರರ ಸಂಖ್ಯೆಯಿಂದ ಹಿಡಿದು ASDDO ಅಂಕಿ-ಅಂಶಗಳಲ್ಲಿನ ವ್ಯತ್ಯಾಸ, Unmatched Voters, No Mapping/Logical Anomaly, ಮತಗಟ್ಟೆಗಳ ದೊಡ್ಡ ಪ್ರಮಾಣದ ಸ್ಥಳಾಂತರ ಹಾಗೂ ಮತಪಟ್ಟಿ ಸಂಬಂಧಿತ ದಾಖಲೆಗಳ ಲಭ್ಯತೆವರೆಗೆ ಹಲವು ಪ್ರಶ್ನೆಗಳಿಗೆ ಉತ್ತರಿಸುವಂತೆ ಆಯೋಗಕ್ಕೆ ಪತ್ರ ಬರೆದಿದ್ದೆ ಎಂದು ಹರಿಪ್ರಸಾದ್ ಹೇಳಿದ್ದಾರೆ.
ಅರ್ಹ ಮತದಾರನೊಬ್ಬನ ಹೆಸರೂ ತಾಂತ್ರಿಕ ಲೋಪದಿಂದ ಅಳಿಸಿಹೋಗಬಾರದು; ಪ್ರತಿಯೊಂದು ವ್ಯತ್ಯಾಸಕ್ಕೂ voter-wise reconciliation ಆಗಬೇಕು ಎಂದು ಆಗ್ರಹಿಸಿದ್ದೆವು. ಈಗ BLOಗಳು pre-SIR ಮತ್ತು ಈಗಿನ ಪಟ್ಟಿಗಳನ್ನು ಹೋಲಿಸಿ ಹೊರಗುಳಿದವರನ್ನು ಗುರುತಿಸಿ, ಮನೆಮನೆಗೆ ಭೇಟಿ ನೀಡಿ ಅರ್ಹರ Form-6 ನೋಂದಣಿಗೆ ನೆರವಾಗಬೇಕು ಎಂದು ಆಯೋಗ ಸೂಚಿಸಿರುವುದು ಸ್ವಾಗತಾರ್ಹ.
Form-7 ಅನ್ನು ದುರ್ಬಳಕೆ ಮಾಡಿಕೊಂಡು ನೈಜ ಮತದಾರರ ಹೆಸರುಗಳನ್ನು ತೆಗೆಸುವ ಪ್ರಯತ್ನಗಳ ಬಗ್ಗೆಯೂ ಸೆಪ್ಟೆಂಬರ್ 29ರ ಪತ್ರದಲ್ಲಿ ಬಬಲೇಶ್ವರ, ಭಾಲ್ಕಿ, ಮೂಡಿಗೆರೆ ಮತ್ತು ಬೆಳಗಾವಿ ದಕ್ಷಿಣ ಕ್ಷೇತ್ರಗಳ ಉದಾಹರಣೆಗಳನ್ನು ನೀಡಿ ತಕ್ಷಣ ಕಾನೂನು ಕ್ರಮಕ್ಕೆ ಒತ್ತಾಯಿಸಿದ್ದೆವು. ನಿನ್ನೆ ಆಯೋಗದ ಕಚೇರಿ ಎದುರು ಕಾಂಗ್ರೆಸ್ ಪ್ರತಿಭಟನೆಯ ನಂತರ ಕರ್ನಾಟಕ CEO ಕಚೇರಿ fraudulent bulk Form-7 ಅರ್ಜಿಗಳ ಕುರಿತು ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿರುವುದೂ ಗಮನಾರ್ಹ ಎಂದು ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ.
SIR ಕುರಿತು ಚುನಾವಣಾ ಆಯೋಗಕದ ಲೋಪಗಳನ್ನು ನಾವು ಪ್ರಶ್ನಿಸಿದಾಗ ಕಾಂಗ್ರೆಸ್ ಸುಳ್ಳು ಹೇಳುತ್ತಿದೆ ಎಂದು ಆಯೋಗದ ವಕ್ತಾರರಂತೆ ಮಾತಾಡುತ್ತಿದ್ದ ಬಿಜೆಪಿಯವರು ಈಗ ಉತ್ತರಿಸಲಿ.ಮತದಾರರ ಪಟ್ಟಿಯಿಂದ ಹೊರಗುಳಿದವರನ್ನು ಮತ್ತೆ ಹುಡುಕಿ ನೋಂದಾಯಿಸಲು ವಿಶೇಷ ಅಭಿಯಾನವೇ ಅಗತ್ಯವಿರಲಿಲ್ಲವೆಂದಾದರೆ, ಚುನಾವಣಾ ಆಯೋಗ ಇಂದು BLOಗಳಿಗೆ pre-SIR ಪಟ್ಟಿಯೊಂದಿಗೆ ಹೋಲಿಕೆ ಮಾಡಿ ಮನೆಮನೆಗೆ ತೆರಳುವಂತೆ ಏಕೆ ಸೂಚಿಸಿದೆ?
ಪ್ರಜಾಪ್ರಭುತ್ವದಲ್ಲಿ ಮತದಾನದ ಹಕ್ಕು ಯಾರೊಬ್ಬರ ದಯೆಯೂ ಅಲ್ಲ — ಅದು ಸಂವಿಧಾನಾತ್ಮಕ ವ್ಯವಸ್ಥೆ ರಕ್ಷಿಸಬೇಕಾದ ನಾಗರಿಕನ ಹಕ್ಕು. ಒಬ್ಬೇ ಒಬ್ಬ ಅರ್ಹ ಮತದಾರನನ್ನೂ ಮತಪಟ್ಟಿಯಿಂದ ಅನ್ಯಾಯವಾಗಿ ಹೊರಗಿಡಲು ಬಿಡುವುದಿಲ್ಲ. ಏಳು ಪತ್ರಗಳಲ್ಲಿ ಎತ್ತಿದ ಪ್ರಶ್ನೆಗಳಿಂದ ಹಿಡಿದು ಚುನಾವಣಾ ಆಯೋಗದ ಬಾಗಿಲಿನವರೆಗಿನ ನಮ್ಮ ಹೋರಾಟ ಇಲ್ಲಿಗೆ ಮುಗಿದಿಲ್ಲ. SIRನ ಪ್ರತಿಯೊಂದು ಲೋಪ ಸರಿಯಾಗುವವರೆಗೆ, ಪ್ರತಿಯೊಬ್ಬ ಅರ್ಹ ಮತದಾರನ ಹೆಸರು ಪಟ್ಟಿಯಲ್ಲಿ ಖಚಿತವಾಗುವವರೆಗೆ ಕಾಂಗ್ರೆಸ್ ಪಕ್ಷದ ಕಾನೂನಾತ್ಮಕ ಹಾಗೂ ಪ್ರಜಾಸತ್ತಾತ್ಮಕ ಹೋರಾಟ ಮುಂದುವರಿಯಲಿದೆ ಎಂದು ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ.




