ನಾ ಯಾರಿಗೂ ಹೆದರೋ ಮಗಾನೇ ಅಲ್ಲ – ‘ಕೈ’ ಆಫರ್ ಬಗ್ಗೆ ಜಾರಕಿಹೊಳಿ ಮಾತು!

ಬೆಳಗಾವಿ ರಾಜಕಾರಣದಲ್ಲಿ ಮತ್ತೊಮ್ಮೆ ಗೋಕಾಕ ಸಾಹುಕಾರ ರಮೇಶ್ ಜಾರಕಿಹೊಳಿ ಅಬ್ಬರಿಸಿದ್ದಾರೆ. ಶುಕ್ರವಾರ ಅಥಣಿಯಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಮಾಲೋಚನ ಸಭೆಯಲ್ಲಿ ಮಾತನಾಡಿದ ಮಾಜಿ ಸಚಿವ ಹಾಗೂ ಶಾಸಕ ರಮೇಶ್ ಜಾರಕಿಹೊಳಿ, ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ ವಿರುದ್ಧ ನೇರ ವಾಗ್ದಾಳಿ ನಡೆಸಿದ್ದಾರೆ. ಅಲ್ಲದೆ, ತಮಗೂ ಕಾಂಗ್ರೆಸ್ ಪಕ್ಷದಿಂದ ಆಫರ್ ಬರುತ್ತಿರುವ ವಿಚಾರವನ್ನು ಅವರು ಬಹಿರಂಗಪಡಿಸಿದ್ದಾರೆ.

ಎಸ್ ‘ಸುದ್ದಿಗಾರರೊಂದಿಗೆ ಮಾತನಾಡಿದ ರಮೇಶ್ ಜಾರಕಿಹೊಳಿ, ಲಕ್ಷ್ಮಣ ಸವದಿ ಮತ್ತೆ ಬಿಜೆಪಿಗೆ ಬರುವುದಿಲ್ಲ. ಬಿಜೆಪಿಯಲ್ಲಿದ್ದಾಗ ಚುನಾವಣೆಯಲ್ಲಿ ಸೋತು ಮನೆಯಲ್ಲಿ ಕುಳಿತಿದ್ದವರಿಗೆ ಕರೆದು ಡಿಸಿಎಂ ಸ್ಥಾನ ನೀಡಲಾಗಿತ್ತು, ಆದ್ರೆ ಈಗ ಅವರೇ ಪಕ್ಷವನ್ನು ವಿರೋಧಿಸುತ್ತಿದ್ದಾರೆ ಅಂತ ಜಾರಕಿಹೊಳಿ ಟೀಕಿಸಿದ್ದಾರೆ. ಇದೇ ವೇಳೆ, ನನಗೂ ಕಾಂಗ್ರೆಸ್ ಪಕ್ಷದಿಂದ ಮೇಲಿಂದ ಮೇಲೆ ಆಫರ್ ಬರುತ್ತಿವೆ. ಆದ್ರೆ ನಾನು ಯಾವುದೇ ಕಾರಣಕ್ಕೂ ಕಾಂಗ್ರೆಸ್‌ಗೆ ಹೋಗಲ್ಲ, 2028ರ ಚುನಾವಣೆಯಲ್ಲಿ ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರುತ್ತೇವೆ ಅಂತ ಅವರು ಸ್ಪಷ್ಟಪಡಿಸಿದ್ದಾರೆ.

ಮುಂದುವರಿದು ಮಾತನಾಡಿದ ರಮೇಶ್ ಜಾರಕಿಹೊಳಿ, ಅಥಣಿ ಬಿಜೆಪಿ ನಾಯಕರಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಇಲ್ಲಿ ನಾವು ಪದೇ ಪದೇ ಸಭೆ ಮಾಡಿದ್ರೆ ಲಕ್ಷ್ಮಣ ಸವದಿ ಎಚ್ಚರವಾಗ್ತಾರೆ, ಅದಕ್ಕೆ ಗೋಕಾಕನಲ್ಲಿ ಕೂತು ರಾಜಕೀಯ ಲೆಕ್ಕಾಚಾರ ಹಾಕುತ್ತಿದ್ದೇವೆ. ಕೆಲವೊಮ್ಮೆ ಸೈಲೆಂಟ್ ತಂತ್ರವನ್ನೇ ಅನುಸರಿಸಿ ಗೆಲುವು ಸಾಧಿಸುತ್ತೇವೆ. ಕಾಗವಾಡ ಕ್ಷೇತ್ರದ ಬಗ್ಗೆಯೂ ಶಾಸಕ ರಾಜು ಕಾಗೆ ಅವರ ಜೊತೆ ಮಾತನಾಡಿದ್ದು, ಮುಂಬರುವ ಜಿಪಂ, ತಾಪಂ ಮತ್ತು 2028ರ ವಿಧಾನಸಭಾ ಚುನಾವಣೆಯಲ್ಲಿ ಅಥಣಿ ಹಾಗೂ ಕಾಗವಾಡ ಎರಡೂ ಕ್ಷೇತ್ರಗಳನ್ನು ಗೆಲ್ಲುವುದು ಪಕ್ಕಾ ಅಂತ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಲಕ್ಷ್ಮಣ ಸವದಿ ಮಂತ್ರಿಯಾದ ಮೇಲೆ ಗೋಕಾಕ ಸಾಹುಕಾರ ಅಥಣಿಗೆ ಬರೋದನ್ನ ನಿಲ್ಲಿಸಿದ್ದಾರೆ ಅಂತ ಯಾರಾದ್ರೂ ಅಂದುಕೊಂಡಿದ್ರೆ ಅದು ತಪ್ಪು. ನಾನು ಯಾರಿಗೂ ಹೆದರುವ ಮಗನೇ ಅಲ್ಲ, ಕಾರ್ಯಕರ್ತರೂ ಯಾರಿಗೂ ಹೆದರುವ ಅಗತ್ಯವಿಲ್ಲ ಅಂತ ರಮೇಶ್ ಜಾರಕಿಹೊಳಿ ಕಾರ್ಯಕರ್ತರಲ್ಲಿ ಹುರುಪು ತುಂಬಿದ್ದಾರೆ. ಒಟ್ಟಿನಲ್ಲಿ, ಗೋಕಾಕ ಕ್ಷೇತ್ರದ ಬಗ್ಗೆ ನಮಗೆ ಭಯವಿಲ್ಲ, ಅಥಣಿ ಮತ್ತು ಕಾಗವಾಡ ಕ್ಷೇತ್ರಗಳಲ್ಲಿ ಕಮಲ ಅರಳಿಸುವುದೇ ನಮ್ಮ ಗುರಿ ಎನ್ನುವ ಮೂಲಕ ರಮೇಶ್ ಜಾರಕಿಹೊಳಿ ಬೆಳಗಾವಿ ರಾಜಕೀಯದಲ್ಲಿ ಹೊಸ ಸಂಚಲನ ಮೂಡಿಸಿದ್ದಾರೆ.

About The Author