Koppala News: ಕುಷ್ಟಗಿಯಲ್ಲಿ ರಸ್ತೆ ತಡೆದು ಭೀಕರ ಬರಗಾಲ ಪರಿಹಾರಕ್ಕೆ ಬೃಹತ್ ರೈತ ಪ್ರತಿಭಟನೆ!

Koppala News: ​ಕುಷ್ಟಗಿ ತಾಲೂಕಿನಲ್ಲಿ ಭೀಕರ ಬರಗಾಲದ ಆಹಾಕಾರ ಮುಗಿಲು ಮುಟ್ಟಿದೆ! ಮಳೆಯಿಲ್ಲದೆ ಕಂಗೆಟ್ಟಿರುವ ರೈತರು , ಈಗ ತಮ್ಮ ಹಕ್ಕುಗಳಿಗಾಗಿ ಬೀದಿಗಿಳಿದು ಹೋರಾಟಕ್ಕೆ ಧುಮುಕಿದ್ದಾರೆ.

​ಇಂದು ಕುಷ್ಟಗಿ ಪಟ್ಟಣದ ಪ್ರಮುಖ ಕೇಂದ್ರವಾದ ಬಸವೇಶ್ವರ ವೃತ್ತ ಸಂಪೂರ್ಣವಾಗಿ ಸ್ತಬ್ಧವಾಗಿತ್ತು. ಪ್ರಾಂತ ರೈತ ಸಂಘ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಂಟಿ ನೇತೃತ್ವದಲ್ಲಿ ಬೃಹತ್ ರಸ್ತೆ ತಡೆ ಹೋರಾಟ ನಡೆಯಿತು.

ಸುಮಾರು ಎರಡು ಗಂಟೆಗಳ ಕಾಲ ವಾಹನ ಸಂಚಾರ ಸಂಪೂರ್ಣವಾಗಿ ಬಂದ್ ಆಗಿ, ಸರ್ಕಾರದ ವಿರುದ್ಧ ರೈತರ ಆಕ್ರೋಶದ ಕೂಗು ಮುಗಿಲು ಮುಟ್ಟಿತು.

​ಬರಗಾಲದಿಂದ ಕಂಗೆಟ್ಟಿರುವ ತಾಲೂಕಿನ ರೈತರ ಸಂಪೂರ್ಣ ಸಾಲವನ್ನು ತಕ್ಷಣವೇ ಮನ್ನಾ ಮಾಡಬೇಕು, ಸಮರ್ಪಕ ಬರ ಪರಿಹಾರ ತಲುಪಿಸಬೇಕು, ನರೇಗಾ ಯೋಜನೆಯಡಿ ವರ್ಷವಿಡೀ ಉದ್ಯೋಗ ನೀಡಬೇಕು ಹಾಗೂ ಜಾನುವಾರುಗಳ ರಕ್ಷಣೆಗೆ ತಕ್ಷಣ ಗೋಶಾಲೆ ಮತ್ತು ಮೇವಿನ ಬ್ಯಾಂಕ್ ತೆರೆಯಬೇಕು ಎಂದು ರೈತರು ಉಗ್ರವಾಗಿ ಒತ್ತಾಯಿಸಿದರು.

​ವಿಶೇಷವೆಂದರೆ, ಈ ಹೋರಾಟದಲ್ಲಿ 500ಕ್ಕೂ ಹೆಚ್ಚು ಮಹಿಳೆಯರು ಸೇರಿದಂತೆ ನೂರಾರು ರೈತರು ಭಾಗವಹಿಸಿ ತಮ್ಮ ಶಕ್ತಿ ಪ್ರದರ್ಶಿಸಿದರು.

ಸ್ಥಳಕ್ಕೆ ಆಗಮಿಸಿದ ತಾಲೂಕು ದಂಡಾಧಿಕಾರಿಗಳು, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಆರಕ್ಷಕ ವೃತ್ತ ನಿರೀಕ್ಷಕರ ಸಮ್ಮುಖದಲ್ಲಿ, ಮಾನ್ಯ ಮುಖ್ಯಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ತಹಶೀಲ್ದಾರರ ಮುಖಾಂತರ ಸಲ್ಲಿಸಲಾಯಿತು.

​ಈ ಪ್ರತಿಭಟನೆಯಲ್ಲಿ ರೈತ ನಾಯಕರಾದ ನಜೀರ್ ಸಾಬ ಮೂಲಿಮನಿ, ಬಸವರಾಜ್ ಮೇಳಿ, ಮಲ್ಲಿಕಾರ್ಜುನಗೌಡ, ಹನುಮೇಶ ಸೇರಿದಂತೆ ಹಲವು ಪ್ರಮುಖರು ಮುಂಚೂಣಿಯಲ್ಲಿದ್ದರು. ಸರ್ಕಾರ ಇನ್ನಾದರೂ ಎಚ್ಚೆತ್ತುಕೊಂಡು ತಕ್ಷಣ ಸ್ಪಂದಿಸಬೇಕೆಂದು ಆಗ್ರಹಿಸಿದರು.

About The Author