Hubli News: ರಾಷ್ಟ್ರೀಯ ಹೆದ್ದಾರಿ ಬಂದ್: ರಸ್ತೆಯಲ್ಲಿಯೇ ನಿಂತ ಸರಕು ತುಂಬಿದ ಲಾರಿಗಳು..!

Hubli News: ಕಬ್ಬಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡುವಂತೆ ಆಗ್ರಹಿಸಿ ರೈತರು ನಡೆಸುತ್ತಿರುವ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿದೆ. ಕೇಂದ್ರ ಸರ್ಕಾರದ ವಿಳಂಬ ಧೋರಣೆ ಖಂಡಿಸಿ ರೈತ ಸಂಘಟನೆಗಳು ಪುಣೆ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿವೆ. ಇದರ ಪರಿಣಾಮವಾಗಿ ಹುಬ್ಬಳ್ಳಿಯ ಗೋಕುಲ ರಸ್ತೆಯಲ್ಲಿ ಸರಕು ಸಾಗಣೆ ಮಾಡುವ ನೂರಾರು ಲಾರಿಗಳು ರಸ್ತೆಯಲ್ಲಿಯೇ ಸಾಲುಗಟ್ಟಿ ನಿಂತಿವೆ. ಹೆದ್ದಾರಿ ಬಂದ್‌ನಿಂದ ವಾಹನ ಸವಾರರು ಹಾಗೂ ಸರಕು ಸಾಗಣೆದಾರರು ಪರದಾಡುವಂತಾಗಿದೆ.

ಕಬ್ಬಿಗೆ ಸೂಕ್ತ ಬೆಲೆ ನಿಗದಿ ಮಾಡುವಂತೆ ರೈತರ ಆಗ್ರಹ… ಬೇಡಿಕೆ ಈಡೇರಿಸಲು ಕೇಂದ್ರ ಸರ್ಕಾರದ ವಿಳಂಬ ಧೋರಣೆ ವಿರುದ್ಧ ಆಕ್ರೋಶ… ಇದರ ಬೆನ್ನಲ್ಲೇ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ರೈತರ ಪ್ರತಿಭಟನೆ…

ಹೌದು, ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆಗಳ ವತಿಯಿಂದ ಪುಣೆ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಲಾಗಿದೆ. ಇದರಿಂದ ಹುಬ್ಬಳ್ಳಿಯ ಗೋಕುಲ ರಸ್ತೆಯಲ್ಲಿ ಸರಕು ತುಂಬಿಕೊಂಡು ಸಾಗುತ್ತಿದ್ದ ನೂರಾರು ಲಾರಿಗಳು ಮಾರ್ಗಮಧ್ಯೆಯೇ ನಿಂತುಕೊಂಡಿವೆ.

ಹೆದ್ದಾರಿಯಲ್ಲಿ ಸಂಚಾರಕ್ಕೆ ಅಡ್ಡಿಯಾಗಿರುವ ಹಿನ್ನೆಲೆಯಲ್ಲಿ ವಾಹನಗಳು ಮುಂದೆ ಸಾಗಲು ಸಾಧ್ಯವಾಗದೇ ಸಾಲುಗಟ್ಟಿ ನಿಂತಿವೆ. ಇದರಿಂದ ಸರಕು ಸಾಗಣೆ ಕಾರ್ಯಕ್ಕೂ ತೊಂದರೆಯಾಗಿದ್ದು, ಚಾಲಕರು ದಾರಿ ಕಾಣದೆ ಕಾಯುವಂತಾಗಿದೆ.

ಕಬ್ಬಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸುವುದು ಸೇರಿದಂತೆ ರೈತರ ಬೇಡಿಕೆಗಳಿಗೆ ಕೇಂದ್ರ ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂಬುದು ಪ್ರತಿಭಟನಾಕಾರರ ಆಗ್ರಹವಾಗಿದೆ. ರೈತರ ಸಮಸ್ಯೆಗಳಿಗೆ ಪರಿಹಾರ ಸಿಗದಿದ್ದರೆ ಹೋರಾಟ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆಯಿದೆ.

ಒಂದೆಡೆ ತಮ್ಮ ಬೇಡಿಕೆ ಈಡೇರಿಕೆಗಾಗಿ ರೈತರ ಹೋರಾಟ, ಮತ್ತೊಂದೆಡೆ ಹೆದ್ದಾರಿ ಬಂದ್‌ನಿಂದ ಸಂಕಷ್ಟಕ್ಕೆ ಸಿಲುಕಿದ ವಾಹನ ಸವಾರರು ಹಾಗೂ ಸರಕು ಸಾಗಣೆದಾರರು. ಕೇಂದ್ರ ಸರ್ಕಾರ ಈ ಸಮಸ್ಯೆಗೆ ಯಾವಾಗ ಪರಿಹಾರ ಕಂಡುಕೊಳ್ಳಲಿದೆ ಎಂಬುದನ್ನು ಕಾದುನೋಡಬೇಕಿದೆ.

About The Author